ಶನಿವಾರ, ಸೆಪ್ಟೆಂಬರ್ 8, 2012

ಅಟ್ಲಾಂಟದಲ್ಲಿ ಕನ್ನಡ ಕಲರವ

ಇತ್ತೀಚೆಗೆ ಅಟ್ಲಾಂಟದಲ್ಲಿ ನಡೆದ ೭ನೇ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನ ಅಟ್ಲಾಂಟ ಕನ್ನಡ ಮನಸುಗಳಿಗೆ ಕನ್ನಡದ ಕಂಪು ಪಸರಿಸಿತು. ಕರ್ನಾಟಕದಲ್ಲಿದ್ದೂ ನೋಡಲಾಗದಿದ್ದ ಅನೇಕ ಕನ್ನಡದ ಮೇರು ವ್ಯಕ್ತಿಗಳನ್ನ ಅಮೆರಿಕಾದಲ್ಲಿ ಮುಖತಃ ಕಂಡು ಕಣ್ತುಂಬಿಕೊಂಡಿದ್ದು ನಿಜಕ್ಕೂ ಮರೆಲಾಗದ ಅನುಭವ.


ಮುಖ್ಯಮಂತ್ರಿ ಚಂದ್ರುರವರ ಹಸನ್ಮುಖತೆ, ಸುಧಾ ಮೂರ್ತಿ ಅವರ ಸರಳತೆ, ಕಂಬಾರರ ಕನ್ನಡ ಕಾಳಜಿ, ಟಿ ಎನ್ ಸೀತಾರಾಮ್ ಅವರ ಮುಕ್ತ ಮಾತುಕತೆ, ಡುಂಡಿರಾಜರ ನವಿರು ಹಾಸ್ಯ, ಪದ್ಮರಾಜ ದಂಡಾವತಿ ಅವರ ಮಾಧ್ಯಮ ಪಾಂಡಿತ್ಯ, ಅರ್ಚನ ಉಡುಪ ಅವರ ಸುಮಧುರ ಗಾನಸಿರಿ, ಮೈಸೂರು ಆನಂದ್ ಮತ್ತು ಶರತ್ ಲೋಹಿತಾಶ್ವ ಅವರ ಮನರಂಜನೆ ಎಲ್ಲವು ಸೇರಿ ಮನಸ್ಸು ತುಂಬಿ ಬಂದಿತ್ತು.

ಕರ್ನಾಟಕದಲ್ಲೇ ಕನ್ನಡ ಕಾಳಜಿ ಕಡಿಮೆಯಾಗುತ್ತಿರುವ ಇಂದಿನ ದಿನಗಳಲ್ಲಿ ಹೊರನಾಡುಗಳಲ್ಲಿ ಕನ್ನಡದ ಹಣತೆ ಬೆಳಗುವ ಇಂತಹ ಸಮ್ಮೇಳನಗಳು ತೀರಾ ಅಗತ್ಯ. ಸಮ್ಮೇಳನದ ಸಂಘಟಕರಿಗೂ,ಅತಿಥಿಗಳಿಗೂ,ಪ್ರಾಯೋಜಕರಿಗೂ ಹೃತ್ಪೂರ್ವಕ ಧನ್ಯವಾದಗಳು.

ಗುರುವಾರ, ಏಪ್ರಿಲ್ 28, 2011

ಕಾಲು ಹೋಗಿ ಬಸ್ಸು ಬಂತು... ಸ್ಕೂಲು ಹೋಗಿ ಕಾನ್ವೆಂಟ್ ಬಂತು ಡುಂ ಡುಂ ಡುಂ...


 ನಾನು ಓದುತ್ತಿದ್ದಾಗ ನಮ್ಮೂರಿನಲ್ಲಿ ಇದ್ದಿದ್ದು ಕೇವಲ ಪ್ರಾಥಮಿಕ ಶಾಲೆ ಮಾತ್ರ ... ೬ ರಿಂದ ೧೦ ನೆ ತರಗತಿವರೆಗೆ ಓದಲು ಪಕ್ಕದ ಊರಿಗೆ ೬ ಮೈಲಿ ನಡೆದು ಹೋಗಬೇಕಿತ್ತು... ಸುತ್ತಮುತ್ತಲಿನ ಹತ್ತಿಪ್ಪತ್ತು ಹಳ್ಳಿಗಳಿಗೆ... ಒಂದೇ ಒಂದು ಪ್ರೌಢ ಶಾಲೆ... ಸಾವಿರಾರು ಮಂದಿಗೆ ಭವಿಷ್ಯ ರೂಪಿಸಿದ ಪ್ರೌಢ ಶಾಲೆ ಈಗ ಜೊತೆಗೆ ಪ್ರಥಮ ದರ್ಜೆ ಕಾಲೇಜು ಸೇರಿಕೊಂಡಿದೆ. ನನ್ನ ಈ ಬರಹದ ಕಾರಣ ಪ್ರೌಢಶಾಲೆಯಲ್ಲ ನನ್ನೂರಿನ ಪ್ರಾಥಮಿಕ ಶಾಲೆ....


ಬಸ್ಸಿಲ್ಲದ ನನ್ನೂರಿಗೆ ಎರಡು ವರ್ಷಗಳಿಂದ ಬಸ್ಸು ಸೇವೆ ಶುರುವಾಗಿದೆ, ಇದು ಊರಿಗೆ ವರವಾದರೆ ಶಿಕ್ಷಣಕ್ಕೆ ಎರವಾಗಿ ಪರಿಣಮಿಸಿದೆ. ಮಕ್ಕಳಿಗೆ ಕಾನ್ವೆಂಟ್ ಮತ್ತು ಆಂಗ್ಲ ಶಿಕ್ಷಣವೆ ದಾರಿ ದೀಪ ಎಂಬ ತಪ್ಪು ಕಲ್ಪನೆ, ಕೆಲವೊಮ್ಮೆ ಪ್ರತಿಷ್ಠೆ ಮತ್ತು ಅಜ್ಞಾನದಿಂದ ಎಲ್ಲ ಮಕ್ಕಳನ್ನು ಹತ್ತಿರದ ನಗರಕ್ಕೆ ಕಳುಹಿಸುತ್ತಿರುವ ವಿಷಯ ತಿಳಿದು ಬಹಳ ಬೇಸರ ತರಿಸಿದೆ. ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ... ಮುಂಬರುವ ದಿನಗಳಲ್ಲಿ ಮಾಧ್ಯಮಿಕ ಮತ್ತು ಪ್ರೌಢ ಶಾಲೆಗಳಿಗೂ ಇದೆ ಗತಿ.

ಇಲ್ಲಿ ನನಗೆ ಕಾಣಿಸುತ್ತಿರುವುದು, ಜನರಲ್ಲಿ ಅರಿವಿನ ಕೊರತೆ, ಮಕ್ಕಳಿಗೆ ಕನಿಷ್ಠ ಪಕ್ಷ ಪ್ರಾಥಮಿಕ ಶಿಕ್ಷಣ ಕನ್ನಡದಲ್ಲಿ ಕೊಡಿಸುವುದರ ಅಗತ್ಯತೆ, ಕನ್ನಡದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಮಕ್ಕಳ ಬುದ್ದಿಮತ್ಯೆ ಮತ್ತೆ ಗ್ರಹಿಸುವ ಶಕ್ತಿ ಹೆಚ್ಕಾಗುವುದರ ಅರಿವು.... ಕನ್ನಡ ಮಾದ್ಯಮದಲ್ಲಿ ಓದಿದರೂ ಮುಂದೆ ಒಳ್ಳೆಯ ಉದ್ಯೋಗಾವಕಾಶಗಳು ದೊರೆಯುತ್ತವೆ ಎಂಬ ನಂಬಿಕೆ.. ಕನ್ನಡ ಮಾದ್ಯಮದಲ್ಲಿ ಓದಿ ಸಾದಿಸಿದವರ ಉದಾಹರಣೆಗಳು ... ಇವೆಲ್ಲ ಸಮಾಜದ ಮನದಲ್ಲಿ ಮೂಡದಿದ್ದರೆ.... ಸರ್ಕಾರಿ ಕನ್ನಡ ಶಾಲೆಗಳ ಜೊತೆಗೆ ಕನ್ನಡ ಭಾಷೆ ಕೂಡ ಮಾಯವಾಗುವ ಕಾಲ ದೂರವಿಲ್ಲ ಎಂದೆನಿಸುತ್ತಿದೆ...

'ಕನ್ನಡವೆ ಕಲಿಯದ ಮುಗ್ದ ಮನಸುಗಳಲ್ಲಿ ಕನ್ನಡ  ಭಾವನೆಗಳು ಮೂಡಲು ಸಾದ್ಯವೇ? 'ಕನ್ನಡಕೆ ಹೋರಾಡು ಕನ್ನಡದ ಕಂದ'  ಕವಿತೆಯೇನಾದರು ಕಿವಿಗೆ ಬಿದ್ದರೆ ಅಪಹಾಸ್ಯವಾಗಿ ಕಾಣದೆ ಇರುವುದೇ? 'ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು' ಈ ಕವಿನುಡಿ ಎಂದಾದರು ಕೇಳಿಸುವುದೇ? ೨೦೦೦ ವರ್ಷಗಳಿಂದ ಹುಟ್ಟಿ ಬೆಳೆದು ಬಂದ ಕನ್ನಡ, ನಮ್ಮ ಅಪ್ಪ, ಅಮ್ಮ, ತಾತ ,ಮುತ್ತಾತಂದಿರು, ಪೂರ್ವಜರು ಆಡಿ ನುಡಿದು ನಲಿಸಿದ ಕನ್ನಡ ನಮ್ಮ ಮಕ್ಕಳು ಮೊಮ್ಮಕ್ಕಳು ಮರಿಮಕ್ಕಳು ಬರುವ ಹೊತ್ತಿಗೆ ನಶಿಸಿ ಹೋಗದೆ ಇರದೇ ?

ಮಕ್ಕಳಿಗೆ ಕನಿಷ್ಠ ಪಕ್ಷ ಪ್ರಾಥಮಿಕ ಶಿಕ್ಷಣ ಕನ್ನಡದಲ್ಲಿ ಕೊಡಿಸಿ... ಈ ವಿಚಾರಗಳನ್ನ ಇತರರಿಗೂ ತಿಳಿಸಿ!

ಭಾನುವಾರ, ಫೆಬ್ರವರಿ 20, 2011

ಬೆಂಗಳೂರು ಬೆಂದಕಾಳೂರಲ್ಲ!

ಅಚ್ಚ ಕನ್ನಡದಲ್ಲಿ "ಬೇಂಗ" ಎಂದರೆ ಶ್ರೀಗಂಧ. ಬೆಂಗಳೂರು ಎಂದರೆ ಶ್ರೀಗಂಧವಿರುವ ಊರು!
ಕನ್ನಡ ಚಿತ್ರರಂಗವನ್ನು 'ಸ್ಯಾಂಡಲ್ ವುಡ್ ' ಎಂದು ಕರೆಯುತ್ತಿರುವುದು ... ಬೇರೆ ಎಲ್ಲ 'ವುಡ್ ' (ಬಾಲಿವುಡ್ ಟಾಲಿವುಡ್ , ಕೊಲಿವುಡ್) ಗಳಿಗಿಂತ ಹೆಚ್ಚು ಸಮಂಜಸ ಮತ್ತು ಅರ್ಥಪೂರ್ಣ....


ಶನಿವಾರ, ಜನವರಿ 29, 2011

ಅಮಿತನ ಕನಸಿನ ಪಯಣ...

ಎಷ್ಟು ಸಲ ಅಂತ ರಿಫ್ರೇಶ್ ಮಾಡೋದು... ಏನೂ ಹೊಸ ಅಪ್ಡೇಟ್ಸ್ ಬರ್ತಾನೆ ಇಲ್ವಲ್ಲ ಅಂತ ಬೇಜಾರ್ ಮಾಡ್ಕೊಂಡು ಇನ್ನೇನ್ ಫೇಸ್ಬುಕ್ ಕ್ಲೋಸ್ ಮಾಡ್ಬೇಕು ಆನ್ಕೊಳ್ಳ್ ತ್ತಿದ್ದಂಗೆ ಕಾಣ್ಸಿದ್ದು 'ಸಂದೇಶಪೆಟ್ಟಿಗೆ'  ಯೊಳಗೊಂದು ಹೊಸ ಸಂದೇಶ.... ಅದು ಅಮಿತ್ ಕಂಡ ಕನಸಿನ ವಿವರಣೆಯಾಗಿತ್ತು .... ಸಿನಿಮಾದ ಗಾಳಿ-ಗಂಧ ಗೊತ್ತಿಲ್ದೇ ಇರೋ ಡೈರೆಕ್ಟರ್ನ ಹತ್ರ ಬರ್ಸಿರೋ ಚಿತ್ರಕಥೆ ತರ ಇದ್ದ ಆ ಹಾಸ್ಯಮಯ ಕನಸಿನಲ್ಲಿ ನಾನು ಒಬ್ಬ ಪಾತ್ರಧಾರಿ ಆಗಿದ್ದರಿಂದ ಇಲ್ಲಿ  ಹಂಚಿಕೊಳ್ಳುತ್ತಿದ್ದೇನೆ ....

ಓದುವ ಮೊದಲು ...
ನವೋದಯ = ಮಂಡ್ಯದ ಶಿವಾರಗುಡ್ಡ, ಮಲ್ಲೀಗೆರೆ = ಕೆ ಆರ್ ಎಸ್ ಬಳಿಯಿರುವ ನನ್ನೂರು... 
ನಾನು= ಅಮಿತ್ , ನೀನು = ಚಂದ್ರು,

"ಮಂಡ್ಯದ ನಮ್ಮ ಪ್ರಾಥಮಿಕ ಶಾಲೆ ಇಂದ ನಾನು ನೀನು ನಮ್ಮ ನವೋದಯ ಫ್ರೆಂಡ್ ಇಟ್ಟಿದ್ದ ಆಟೋದಲ್ಲಿ ಹೊರಟೆವು... ಅಲ್ಲಿಂದ ತಲುಪಿದ್ದು ಮಲ್ಲಿಗೆರೆಗೆ... ಬರಿ ನಾನು ನೀನು ಮಾತ್ರ.. ನವೋದಯ ಫ್ರೆಂಡ್ ಹಾಗು ಅವನ ಆಟೋ ಏನ್ ಆಯಿತು ನತ್ ಗೊತ್ತಿಲ್ಲ.. ನಿಮ್ಮನೆ ಬೀಗ ಆಕಿತ್ತು.. ಛೆ ನಾನ್ ಬರದು ಗೊತ್ತಿದ್ರು ಎಲ್ಲೋ ಹೋಗಿದರೆ ಅಂತ ನೀನು ಗೊಣಗಿದೆ... ನಾನು ಮನೆ ಬೀಗ ಹೊಡಿದೆ ಹೇಗಾದ್ರು ಒಳಗೆ ಹೋಗಬಹುದ ಅಂತ ಯೋಚನೆ ಮಾಡ್ತಾ ಇದ್ದೆ.. ಆ ಹೊತ್ತಿಗೆ ನವೋದಯದ ಅನೇಕ ಗೆಳೆಯರು ಮಲ್ಲಿಗೆರೆಯ ಅವರವರ ಮನೆಯಿಂದ ಹೊರಬಂದು "ಹಬ್ಬ ನಮ್ಮ ಮನೆಯವರನ್ನು ಮೀಟ್ ಮಾಡಿ ಆಯಿತು ಹೋಗೋಣ" ಎಂದರು! ಅವರು ಯಾವಾಗ, ಹೇಗೆ ಬಂದರು ಎಂದು ನನಗೆ ಗೊತ್ತಿಲ್ಲ.. ಸರಿ ಎಂದು ನಾನು ನೀನು ಅಲ್ಲಿಂದ ನನ್ನ ಕಪ್ಪು ಟಿವಿಎಸ್ ಏರಿ ಹೊರಟೆವು... ಮತ್ತೆ ಟಿವಿಎಸ್ ಎಲ್ಲಿಂದ ಬಂತು ಅಂತ ಗೊತ್ತಿಲ್ಲ... ಸ್ವಲ್ಪ ಹೊತ್ತಿನ ನಂತರ ಇಳಿದದ್ದು ಒಂದು ಎತ್ತರದ ಪ್ರದೇಶದಲ್ಲಿ.. ಅದು ಎಷ್ಟು ಚೆನ್ನಾಗಿತ್ತು ಅಂದರೆ ನಾನು ಇದುವರೆಗೂ ಅಂತಹ ಜಾಗ ಇರುವ ಬಗ್ಗೆ ಕೇಳಿಲ್ಲ... ಮಂಜಿಲ್ಲದ ನೀಲಿ-ಶ್ವೇತ ಮಿಶ್ರಿತ ಪರ್ವತ, ಅಲ್ಲಲ್ಲೇ ಕಣಿವೆ.. ಇನ್ನೊಂದು ವಿಷಯ - ಈಗ ನಮ್ಮ ಜೊತೆ ನವೋದಯದ ಗೆಳಯ ಇದ್ದ! ಫ್ಲೈಟ್ ಜರ್ನಿ ಹೇಗಿತ್ತು ಅಂತ ಕೇಳಿದ.. ಮಸ್ತ್ ಅಂತ ನಾನು ಹೇಳಿದೆ.. ಇದು ಯಾವ ಜಾಗ ಅಂತ ನೀನು ಕೇಳಿದೆ.. ಅಲ್ಲಲ್ಲೇ ಇದ್ದ ಜನರ ಮುಖ ಲಕ್ಷಣ ಹಾಗು ನನ್ನ ಭೂಗೋಳದ ಅರಿವನ್ನ ಉಪಯೋಗಿಸಿ ಆಸ್ಟ್ರೇಲಿಯಾ ಅಂತ ಹೇಳಿದೆ.. ಅದಕ್ಕೆ ನನ್ನ ನವೋದಯದ ಗೆಳೆಯ ಇದು ಆಸ್ಟ್ರೇಲಿಯಾ ಅಲ್ಲ ಹಾಂಗ್-ಕಾಂಗ್ ಅಂತ ಹೇಳಿದ.. ಆಗ ಅಲ್ಲಿದ್ದ ಜನರ ಮುಖಗಳನ್ನ ಮತ್ತೆ ನೋಡಿದೆ.. ಅವರ ಮುಖಗಳು ಚಿನ್ಕಿಗಳ ಮುಖಗಳ ಹಾಗೆ ಬದಲಾಗಿದ್ದವು! ಸ್ವಲ್ಪ ಹೊತ್ತಿನ ನಂತರ, ನನ್ನ ನವೋದಯದ ಗೆಳಯ ಬನ್ನಿ ನಡ್ಕೊಂಡು ಮೈಸೂರಿಗೆ ಹೋಗ್ಬೇಕು ಬೇಗ ಹೊರಡೋಣ ಅಂತ ಹೇಳಿದ.. ಆ ಜಾಗ ಎಷ್ಟು ಸುಂದರವಾಗಿತ್ತು ಅಂದರೆ ಅಲ್ಲಿಂದ ಹೊರಡಲು ನನಗೆ ಮನಸ್ಸಿರಲಿಲ್ಲ.. ಅಲ್ಲಿಂದ ಹೊರಡುವುದನ್ನು ತಡೆಯಲು ತುಂಬಾ ಕಷ್ಟಪಟ್ಟು ಕಣ್ಣುಗಳನ್ನು ತೆರೆದೆ... ಹಾಸಿಗೆಯ ಮೇಲೆ ಹತ್ತು ನಿಮಿಷ ಘಾಡವಾಗಿ ಯೋಚಿಸಿ ಮೈಮುರಿಯುತ್ತ ನನ್ನ ಮಧ್ಯಾನದ ಮೂರುವರೆ ಘಂಟೆಯ ದೀರ್ಘ ನಿದ್ರೆಯಿಂದ ಎದ್ದು ಕಳೆದ ವಿಚಿತ್ರ ಸಮಯವನ್ನೂ ದಾಖಲಿಸಬೇಕು ಅಂತ ಫೇಸ್ಬುಕ್ಗೆ ಲಾಗಿನ್ ಆಗಿ ಈ ಸಂದೇಶನ ನಿನಗೆ ಕಳುಹಿಸುತ್ತಾ ಇದ್ದೀನಿ.. "

ಸಾಮಾನ್ಯವಾಗಿ ಬೋರಿಂಗ್ ಆಗಿರುವ ಅಮೆರಿಕದ ವಾರದ ಕೊನೆ ಬಹಳ ಕಾಲದ ನಂತರ ಹಾಸ್ಯದೊಂದಿಗೆ ಕೊನೆಗೊಂಡಿತು..!

ಶುಕ್ರವಾರ, ಜನವರಿ 14, 2011

ಸಂಕ್ರಾಂತಿ ಸಡಗರವ ನೆನೆಯುತ.....

ಸಂಕ್ರಾಂತಿ ಹುಡುಗರಿಗಲ್ಲ ಹುಡುಗಿಯರಿಗೆ ಅಂತ ನಮ್ಮಮ್ಮ ಆಗಾಗ ಹೇಳುತ್ತಿದ್ದು ಕೇಳಿ ಬೇಸರಗೊಳ್ಳುತ್ತಿದ್ದ ನನಗೆ ಸಮಾಧಾನ ನೀಡುತ್ತಿದ್ದು ಅವರು ಮಾಡುತ್ತಿದ್ದ ಎಳ್ಳು-ಬೆಲ್ಲ. ತಂಗಿಯರೆಲ್ಲ ಹೊಸ ಬಟ್ಟೆ ಕೊಳ್ಳುವಾಗ ಹೊಮ್ಮುತ್ತಿದ್ದ ಅಸಮಾಧಾನದ ಕ್ರಾಂತಿ ಸಂಕ್ರಾಂತಿಯಂದು ಬೇಯಿಸಿದ ಹಸಿ ಅವರೆಕಾಯಿ ಮತ್ತು ಗೆಣಸು ತಿಂದ ನಂತರವೇ ಕಡಿಮೆಯಾಗುತ್ತಿತ್ತು. ಸಂಕ್ರಾಂತಿ ಸಂಭ್ರಮ ಹಬ್ಬಕ್ಕೆ ಒಂದೆರಡುವಾರ ಇರುವಾಗಲೇ ಹೊಸವರ್ಷದೊಂದಿಗೆ ಆರಂಭವಾಗುತ್ತಿತ್ತು. ಶಾಲೆಯಲ್ಲಿ ಹೊಸವರ್ಷಕ್ಕೆ ಗ್ರೀಟಿಂಗ್ಸ್ ಕಾರ್ಡ್ ಕೊಡದೆ ಮುನಿಸಿಕೊಳ್ಳುತ್ತಿದ್ದ ಗೆಳೆಯರಿಗೆ ‘ಹೊಸ ವರ್ಷ ಮತ್ತು ಸಂಕ್ರಾಂತಿ’ ಎರಡು ಸೇರಿಸಿ ಗ್ರೀಟಿಂಗ್ಸ್ ಕಾರ್ಡ್ ಕೊಡುವುದಾಗಿ ಹೇಳುತ್ತಲೇ ಸಂಕ್ರಾತಿಯ ಆಗಮನ.

ಗ್ರೀಟಿಂಗ್ಸ್ ಕಾರ್ಡ್ ಜೊತೆಗೆ ಬರೆಯುತ್ತಿದ್ದ ಬಾಲಿಶ ಕವನವೊಂದು ನೆನಪಾಗುತ್ತಿದೆ ... ‘ನಾನೊಂದು ಕ್ರಾಂತಿ... ನೀನೊಂದು ಕ್ರಾಂತಿ... ನಮ್ಮಿಬ್ಬಿರ ಕ್ರಾಂತಿ ಈ ಸಂಕ್ರಾಂತಿ‘     

ಶಾಲೆ ಮುಗಿಸಿ ಮನೆಗೆ ಬಂದರೆ ಸಂಕ್ರಾತಿ ಕಚ್ಚಾ ವಸ್ತುಗಳ ಸಂಗ್ರಹ ... ಗೆಣಸು .. ಅವರೆಕಾಯಿ ... ಕಬ್ಬು .... ಕಲೆಹಾಕಲು ಎಲ್ಲಿಲ್ಲದ ಉತ್ಸಾಹ. ಆಗ ತಾನೇ ಕಟಾವುಗೊಂಡ ಗೆಣಸಿನ ಗದ್ದೆಗಳಲ್ಲಿ ಹೆಕ್ಕುವವರ ಕೈಗೆ ಸಿಕ್ಕದೆ ಮಣ್ಣಿನಲ್ಲೇ ಹುದುಗಿ ಚಿಗುರೊಡೆಯುತ್ತಿದ ಗೆಣಸು ಹುಡುಕಲು ದೊಡ್ಡ ಮರಿಸೈನ್ಯವೇ ಹೊರಡುತ್ತಿತ್ತು. ಕುಡುಗೋಲು , ಪಿಕಾಸಿ , ಗುದ್ದಲಿ... ಕೈಗೆ ಸಿಕ್ಕಿದ ಎಲ್ಲಾ ವಸ್ತುಗಳು ಆಯುಧಗಳೇ. ಅತಿ ಹೆಚ್ಚು ಕಲೆಹಾಕಿದವರಿಗೆ ದಿನದ ಗೌರವ.ಹಾಗೆ ಮನೆಗೆ ಹಿಂದಿರುಗುವಾಗ ಹಾದಿಯಲ್ಲಿ ಕೊಯ್ದ ರಾಗಿ ಹೊಲಗಳ ಅವರೆಕಾಯಿ ಸಾಲುಗಳ ಮೇಲೆ ದಾಳಿ. ಅಪ್ಪಿ ತಪ್ಪಿ ಹೊಲದವರ ಕಣ್ಣಿಗೆ ಬಿದ್ದರೆ ಓಟ, ಸಂಕ್ರಾಂತಿಯ ಸಮಯವಾದ್ದರಿಂದ ಹೊಲದವರ ಕೋಪ ಏಟಿಗೆ ಬದಲು ಬೆದರಿಕೆಗಷ್ಟೇ ಸೀಮಿತ. ಮನೆಗೆ ಮರಳಿ ಅಂದಿನ ಶ್ರಮಫಲದ ರಾಶಿ ನೋಡುತ್ತಿದ್ದರೆ ಗೆಣಸು ಬಗೆದು ತರಚಿದ ಕೈಯಾಗಲಿ.ಅವರೆಕಾಯಿ ಸೋನೆ ತಗುಲಿ ಉರಿಯುತ್ತಿದ್ದ ಮುಖವಾಗಲಿ, ಕೂಳೆ ತರಚಿ ರಕ್ತ ಸೋರುವ ಕಾಲಾಗಲಿ ಪರಿವೆಗೆ ಬರುತ್ತಿರಲಿಲ್ಲ...

ಸಂಕ್ರಾಂತಿ ದಿನ ಚುಮು-ಚುಮು ಚಳಿಯಲ್ಲಿ ಬೇಗನೆ ಎದ್ದು ಅಪ್ಪನ ಜೊತೆ ದನ ಕುರಿ ಹಿಡಿದು ಹೊಳೆಗೆ ಹೊರಟರೆ ಅಷ್ಟರಲ್ಲಾಗಲೆ ಸೇರುರುತ್ತಿದ್ದ ಜನರ ದಂಡಿನೊಡನೆ ಸೇರಿ ಓರಗೆಯವರೊಂದಿಗೆ ದನಗರುಗಳೊಂದಿಗೆ ಸ್ಪರ್ದೆಯೊಡ್ಡಿ ಈಜಾಟ. ಕಾವೇರಿ ಅಭ್ಯಂಜನ.ಮುಗಿಸಿ ನೇಸರನ ಉತ್ತರಾಯಣ ಪಯಣದ ಮೊದಲ ಕಿರಣಗಳಿಗೆ ಹೊಳೆದಂಡೆಯಲಿ ಕೆಲಕಾಲ ಮೈಯೊಡ್ಡಿ ಮಲಗಿದರೆ ಅದೇನೋ ಉಲ್ಲಾಸ. ಹೊಳೆಯಿಂದ ಬರುತ್ತಲೇ ಗೋವುಗಳ ಶೃಂಗಾರಕ್ಕೆ ಮನೆಯಲ್ಲಿ ಎಲ್ಲ ಸಿದ್ದವಾಗಿರುತ್ತಿತ್ತು. ಮನಸಾರೆ ಅವುಗಳನ್ನೂ ಶೃಂಗರಿಸಿ ಪೂಜಿಸಿದರೆ ಹುಡಗರ ಸಂಕ್ರಾತಿ ಮುಗಿಯುತ್ತಿತ್ತು. ಒಮ್ಮೊಮ್ಮೆ ಶೃಂಗಾರ ಹೆಚ್ಚಾಗಿ ಬಿಳಿ ಕುರಿಗಳ ಬಣ್ಣವಂತೂ ಪೂರ್ತಿ ಹರಿಶಿನಮಯ.ಮತ್ತೆ ಅವು ಬಿಳಿ ಯಾಗುತ್ತಿದ್ದು ಜೋರು ಮಳೆಯಲ್ಲಿ ತೂಯ್ದಾಗಲೋ ಅಥವಾ ಉಗಾದಿಯಲ್ಲೋ.

ಊರೊಳಗೆ ಎಲ್ಲ ಮನೆಗಳ ಮುಂದೆ ಭರ್ಜರಿ ರಂಗೊಲೆಗಳು ಹೆಣ್ಣುಮಕ್ಕಳ ಗಡಿಬಿಯಾಗಲೇ ಶುರುವಾಗಿರುತ್ತಿತ್ತು. ದೇವರ ಪೂಜೆ ಮತ್ತು ಉಪಹಾರ ಮುಗಿಯುವುದರೊಳಗೆ ಎಳ್ಳು-ಬೆಲ್ಲ ಪೊಟ್ಟಣ ಕಟ್ಟುವ ಕೆಲಸ ನೇಮಕ ವಾಗುತ್ತಿತ್ತು. ಪ್ರತಿ ಸಂಕ್ರಾತಿಗೂ ತಪ್ಪದೆ ಬರುವ ‘ಹಳ್ಳಿ ಮೇಷ್ಟ್ರು’ ಚಿತ್ರದ ‘ಸಂಕ್ರಾಂತಿ ಬಂತು ರತ್ತೋ ರತ್ತೋ ...’ ಗೀತೆಗೆ ಕೋರಸ್ ಕೊಡುತ್ತ ಪೊಟ್ಟಣ ಕಾರ್ಯ ಮುಗಿಯುತ್ತಿತ್ತು.

ಸಂಜೆ ಹೊತ್ತಿಗೆ ತಂಗಿಯರಿಂದ ಎಳ್ಳುಬೀರಲು ಸಹಾಯಕ್ಕಾಗಿ ಬೇಡಿಕೆ. ಎಳ್ಳು-ಬೆಲ್ಲ ಪೊಟ್ಟಣ ತುಂಬಿದ ಪಾತ್ರೆ ಹಿಡಿದು ಸಹಾಯಕನಾಗಿ ಹೊರಟರೆ..... ಇದು ನಮ್ಮ ಊರೇನಾ ಎಂದು ವಿಸ್ಮಯಗೊಳ್ಳುವಷ್ಟು ಸಂಭ್ರಮ ಸಡಗರ ತುಂಬಿದ ಬೀದಿಗಳು, ಬಣ್ಣ ಬಣ್ಣದ ಬಟ್ಟೆ ತೊಟ್ಟು ನಳನಳಿಸುತ್ತಿದ್ದ ಹೆಣ್ಣುಮಕ್ಕಳು. ಶಾಲೆಯಲ್ಲಿ ನೋಡುತ್ತಿದ್ದ ಅದೇ ಮುಖಗಳು ಸಂಕ್ರಾಂತಿಯಂದು ಮಾತ್ರ ವಿಭಿನ್ನ ಮತ್ತು ಚೇತೋಹಾರಿ. ಎಷ್ಟೋ ಮನೆಗಳ ಒಳದರ್ಶನವಾಗುತ್ತಿದ್ದು ಸಂಕ್ರಾಂತಿಯಂದೇ. ಪ್ರತಿ ಮನೆಯಲ್ಲೂ ಎಳ್ಳು-ಬೆಲ್ಲ, ಸಕ್ಕರೆ ಅಚ್ಚು, ಕಬ್ಬು ಹಂಚಿ ‘ಎಳ್ಳು-ಬೆಲ್ಲ ತಿಂದು ಒಳ್ಳೆ ಮಾತಾಡಿ ‘ ಎಂದು ಹಾರೈಸುವುದರ ಜೊತೆಗೆ ಹೊಸಬಟ್ಟೆಗಳ ಬಗ್ಗೆ ವಿಚಾರ ವಿನಿಮಯ ನಡೆಯುತ್ತಿತ್ತು. ಎಲ್ಲ ಮುಗಿಸಿ ಮನೆ ಮರಳುವುದರೊಳಗೆ ವಸ್ತ್ರವಿನ್ಯಾಸದಲ್ಲಿ ಅಘಾದ ಜ್ಞಾನ ಪ್ರಾಪ್ತಿಯಾಗುತ್ತಿತ್ತು. ಅಷ್ಟರೊಳಗೆ ಅಮ್ಮನ ಕೈಯಲ್ಲಿ ಹದವಾಗಿ ಬೆಂದ ಅವರೆಕಾಯಿ ಗೆಣಸು ನಮಗಾಗಿ ಕಾದಿರುತ್ತಿತ್ತು. ಎಲ್ಲಾ ಒಟ್ಟಾಗಿ ಕುಳಿತು ಬಿಸಿ ಬಿಸಿ ಕಾಫಿ ಕುಡಿಯುತ್ತ ಅಮ್ಮ ಬಿಡಿಸಿ ಕೊಡುತ್ತಿದ್ದ ಅವರೆಕಾಯಿ ಗೆಣಸು ತಿನ್ನುತ್ತ ಗಂಟೆಗಟ್ಟಲೆ ಹರಟುತ್ತ ನಿಧಾನಾವಾಗಿ ನಿದ್ರೆಯ ಮಡಿಲಿಗೆ ಜಾರಿಸುತ್ತಿದ್ದ ಆ ಆಪ್ತ ಸಂಕ್ರಾತಿಯ ನೆನಪು ಸಪ್ತ ಸಾಗರದಾಚೆ ರಿಂಗಿಣಿಸುತ್ತಿದೆ.
ಮಲ್ಲೀಗೆರೆ  
-ಚಂದ್ರು ಮಲ್ಲೀಗೆರೆ

ಮಂಗಳವಾರ, ಜನವರಿ 11, 2011

ಹಾರೈಕೆಗಳು ತಾಯ್ನುಡಿಯಲ್ಲಿದ್ದರೆ ಮನಸ್ಸಿಗೆ ಹೆಚ್ಹು ಹತ್ತಿರ...

ಇತ್ತೀಚೆಗೆ ನನ್ನ ಗೆಳೆಯ ಅಮಿತ್ ತನ್ನ ತಂಗಿ ಮಗುವಿಗೆ ಶುಭಕೋರಿ ಅಮೇರಿಕಾದಿಂದ ಉಡುಗೊರೆಯೊಂದನ್ನು ಕಳಿಸಿದ್ದ. ಉಡುಗೊರೆ ಜೊತೆಗೆ ಕಳಿಸಿದ್ದ ಒಂದು ಸಂದೇಶವೊಂದನ್ನು ನನಗೆ ತೋರಿಸಿದ. ಅದು ಹೀಗಿತ್ತು


ಇದನ್ನ ನೋಡಿ ಬಹಳ ಸಂತೋಷ ಆಯ್ತು ಜೊತೆಗೆ ನಮ್ಮಲ್ಲಿ ತಾಯ್ನುಡಿಯಲ್ಲಿ ಶುಭಕೋರುವ ಪದ್ಧತಿ ನಿಧಾನವಾಗಿ ಮರೆಯಾಗುತ್ತಿರುವ ಯೋಚನೆ ಕೂಡ ಮೂಡಿತು...
ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವ ನಮ್ಮಜೀವನ ಶ್ಯಲಿಯ ಜೊತೆಗೆ ನಮ್ಮ ಆಡುಭಾಷೆಯನ್ನು ಕಲುಶಿತ ಗೊಳಿಸಿರುವುದು ತಿಳಿದಿರುವ ವಿಷಯ. ಶುಭ ಸಂದರ್ಭಗಳಲ್ಲಿ ಶುಭಾಶಯ ಕೋರುವ ಮತ್ತು ಹಾರೈಸುವ ಪದ್ದತಿಯಂತು ಪೂರ್ತಿ ಇಂಗ್ಲಿಷ್ ಮಯ. ಎಲ್ಲಿ ಕೇಳಿದರು 'ಹ್ಯಾಪಿ ನ್ಯೂ ಇಯರ್', 'ಹ್ಯಾಪಿ ಮ್ಯಾರೀಡ್ ಲೈಫ್', 'ಹ್ಯಾಪಿ ಬರ್ತ್ಡೇ', 'ಕಾಂಗ್ರಾಜು ಲೇಶನ್ಸ್', 'ಗಾಡ್ ಬ್ಲೆಸ್ಸ್ ಯು',  ಥಾಂಕ್ಯು ಗಳೇ. ಕನ್ನಡದಲ್ಲಿ ಶುಭಕೋರಿದರೆ ಅಥವಾ ಹಾರೈಸಿದರೆ ಆಭಾಸ, ಕೀಳರಿಮೆ ಎಂಬ ಭಾವನೆಯು ಬೆಳೆದಿದೆ.... ಹೀಗೆ ಮುಂದುವರೆದರೆ ನಮ್ಮ ಮುಂದಿನ ಪೀಳಿಗೆ ಮಕ್ಕಳಿಗೆ ಕನ್ನಡದಲ್ಲೂ ಶುಭಕೋರಬಹುದು ಅಂತಹ ಸುಂದರ ಅರ್ಥಗರ್ಭಿತ  ಪದ,ವಾಕ್ಯಗಳು ಇವೆ ಅನ್ನುವುದೇ ತಿಳಿದಿರುವುದಿಲ್ಲ ಎಂದು ನನ್ನ ಅನಿಸಿಕೆ.
 ಈ ಇಂಗ್ಲಿಶ್ ಪದಗಳು ಒಂದು ರೀತ್ಯಿಯ ಯಾಂತ್ರಿಕ ಮಾತುಗಳಾಗಿ ಕಾಣಿಸುತ್ತವೆ.ಆ ಪದಗಳ ಹಿಂದೆ ಯಾವುದೇ ನಿಜವಾದ ಭಾವನೆಗಳು ತುಂಬಿ ಹಾರಿಸುತ್ತಿರುವ ಹಾಗೆ ಅನ್ನಿಸುವುದೇ ಇಲ್ಲಾ. ಅದೇ ಮಾತೃಭಾಷೆಯಲ್ಲಿ  ಹಾರೈಸಿ ನೋಡಿ.. ಮನತುಂಬಿದ ಮಾತೃಭಾಷೆಯ ಹಾರೈಕೆ ಹಾರೈಸಿದವರ ಮನಕ್ಕೆ ಹತ್ತಿರವಾಗುವುದರಲ್ಲಿ ಸಂದೇಹವಿಲ್ಲ ...
 'ಹ್ಯಾಪಿ ನ್ಯೂ ಇಯರ್', 'ಹ್ಯಾಪಿ ಮ್ಯಾರೀಡ್ ಲೈಫ್', 'ಹ್ಯಾಪಿ ಬರ್ತ್ಡೇ', 'ಕಾಂಗ್ರಾಜು ಲೇಶನ್ಸ್', 'ಗಾಡ್ ಬ್ಲೆಸ್ಸ್ ಯು',  ಥಾಂಕ್ಯು ಗಳ ಕಿತ್ತೊಗೆದು ಬದಲಿಗೆ ಸಾದ್ಯವಾದಷ್ಟು ..  'ಹೊಸ ವರ್ಷದ ಶುಭಾಶಯಗಳು','ದಾಂಪತ್ಯ ಜೀವನ ಸುಖವಾಗಿರಲಿ','ಹುಟ್ಟು ಹಬ್ಬದ ಶುಭಾಶಯಗಳು', 'ದೇವರು ಒಳ್ಳೆಯದು ಮಾಡಲಿ', ಧನ್ಯವಾದ, ಹದುಳವಿರಲಿ......  ಹೀಗೆ ಇತರೆ ಹಾರೈಕೆಗಳನ್ನು ಬಳಸಿನೋಡಿ... ಮೊದಮೊದಲಿಗೆ ಆಭಾಸವಾಗಿ ತೋರಬಹುದು... ಕ್ರಮೇಣ ತಾಯ್ನುಡಿಯ ಹಾರೈಕೆಯ ಮಹತ್ವ ತನಗೆ ತಾನೇ ಗೋಚರಿಸುತ್ತದೆ....

ಭಾನುವಾರ, ಜನವರಿ 9, 2011

ಕ್ರಿಕೆಟ್ಟು ಮತ್ತು ಡಾಲರು ...

ನಿನ್ನದೇ ಆಟ
ನಿನ್ನದೇ ಮೈದಾನ
ನಿನ್ನವರೇ ಆಟಗಾರರು
ನಿನ್ನವರೇ ಮಾಲೀಕರು
ಕಟ್ಟುವರೇಕೆ ಬೆಲೆ 'ಡಾಲರಿ'ನಲ್ಲಿ?
ನಿನ್ನವರೇ ನಿನ್ನ ಕಡೆಗಣಿಸುವರೇಕೆ?
ಛೇ ಬಡಪಾಯಿ
ನೀ ರೂಪಾಯಿ!

ಶನಿವಾರ, ನವೆಂಬರ್ 6, 2010

"ದೀಪಾವಳಿ"

ನಾವು ದೀಪ ಬೆಳಗಿಸಿ ನಮ್ಮೂರಲ್ಲಿ ಆಚರಿಸುವ "ದೀಪಾವಳಿ" ಯ ಹೆಸರು ನಿಧಾನವಾಗಿ ಬದಲಾಗುತ್ತಿದೆ. ಎಲ್ಲೆಡೆ ಅದು "ದಿವಾಲಿ", "ದಿವಾಳಿ" ಯಾಗಿ ಭಿತ್ತರವಾಗುತ್ತಿದೆ.... ದೀಪಾವಳಿ "ದೀಪಾವಳಿ" ಯಾಗೆ ಉಳಿದರೆ ಚೆಂದ...
http://kalyana-raman.blogspot.com/2009/10/blog-post.html

ಶನಿವಾರ, ಸೆಪ್ಟೆಂಬರ್ 18, 2010

ಗೂಗಲ್ ನ ಥಟ್ಟನೆ ಹುಡುಕು...

ಗೂಗಲ್.... 'ಹುಡುಕು' ಎಂಬ ಪದಕ್ಕೆ ಸಮಾನಾರ್ಥಕವಾಗುವಷ್ಟು ಪ್ರಭಾವಶಾಲಿಯಾಗಿ ಬೆಳೆದು ನಿಂತ ಜಾಲತಾಣ.  ಬರೆಯಲು ಒಂದು ಸಣ್ಣ  ಜಾಗ ಮತ್ತು ಒಂದು ಹುಡುಕುಗುಂಡಿ ಮಾತ್ರ ಇಟ್ಟುಕೊಂಡು ಅಂತರ್ಜಾಲದಲ್ಲಿ ಏನೆಲ್ಲಾ ಸಾಧಿಸಬಹುದು ಎಂದು ತೋರಿಸುತ್ತಿರುವ ಸಂಸ್ಥೆ...ಇದರ ಮತ್ತೊಂದು ಹೊಸ ಆವಿಷ್ಕಾರ 'ಥಟ್ಟನೆ ಹುಡುಕು' (Google Instant ).
ಹುಡುಕಬೇಕಾದ ಪದವನ್ನು ಟೈಪಿಸಲು ಶುರು ಮಾಡುತ್ತಿದ್ದಂತೆಯೇ ಫಲಿತಾಂಶಗಳನ್ನು ತೋರಿಸಲಾರಭಿಸುತ್ತದೆ. ಹುಡುಕಬೇಕಾದ ಪದ ಅಥವಾ ವಾಕ್ಯವನ್ನು ಪೂರ್ತಿಯಾಗಿ ಟೈಪ್  ಮಾಡುವ ಅಗತ್ಯವೇ ಇಲ್ಲ ಮತ್ತು  ಹುಡುಕುಗುಂಡಿಯನ್ನು ಒತ್ತುವ ಶ್ರಮವೇ ಬೇಕಿಲ್ಲ. ಜೊತೆಗೆ ನಾವು ಹುಡುಕಬೇಕಾಗಿರುವ ಪದ/ವಾಕ್ಯವನ್ನು ಕೆಲವು ಅಕ್ಷರಗಳನ್ನು ಬರೆದ ಕೂಡಲೇ ಊಹಿಸಿ ಅದಕ್ಕೆ ಸರಿಹೊಂದುವ ಫಲಿತಾಂಶಗಳನ್ನು ತೋರಿಸುತ್ತದೆ.
ಸಾಮಾನ್ಯವಾಗಿ ನಾವು ಹುಡುಕಬೇಕಾಗಿರುವುದನ್ನು ಬರೆಯಲು ಹೆಚ್ಚು ಸಮಯ ತೆಗೆದು ಕೊಳ್ಳುತ್ತದೆ ಆದರೆ ಗೂಗಲ್ ಫಲಿತಾಂಶ ಒದಗಿಸಲು ಅಷ್ಟು ಸಮಯ ತೆಗೆದುಕೊಳ್ಳುವುದಿಲ್ಲ, ಈ ಅಂಶವೇ  ' ಥಟ್ಟನೆ ಹುಡುಕು'  ಆವಿಷ್ಕಾರಕ್ಕೆ ಕಾರಣ. ಈ ಹೊಸ ವಿಧಾನದ ಮೂಲಕ ಬರೆಯಲು ಮತ್ತು ಹುಡುಕುಗುಂಡಿಯನ್ನು ಒತ್ತಲು ತೆಗೆದುಕೊಳ್ಳುವ ಸಮಯನ್ನು ಉಳಿಸಬಹುದು. ಗೂಗಲ್ ನ ಅಂದಾಜಿನ ಪ್ರಕಾರ ಈ ಹೊಸ ವಿಧಾನ ಪ್ರತೀ ಸೆಕಂಡ್ ಜಗತ್ತಿನ 11 ಮಾನವ ಗಂಟೆಗಳಷ್ಟು ಸಮಯವನ್ನು ಉಳಿಸುತ್ತದೆ ಎಂಬುದು!. ಗೂಗಲ್ ಪ್ರತಿದಿನ 1 ಬಿಲಿಯನ್ (10 ಕೋಟಿ) ಹುಡುಕಾಟಗಳನ್ನು ನಡೆಸುತ್ತದೆ, ಥಟ್ಟನೆ ಹುಡುಕು' ವಿಧಾನದ ಮೂಲಕ ಗೂಗಲ್ ಇಂದಿನ ಸಾಮರ್ಥ್ಯದ 20 ಪಟ್ಟು ಹೆಚ್ಚು ಸಾಮರ್ಥ್ಯದಿಂದ ಕೆಲಸ ಮಾಡಬೇಕಿದೆ.
ಬರೆದು ಮುಗಿಸುವ ಮೊದಲೇ ಫಲಿತಾಂಶ ಬಂದರೆ, ಗಮನ ಅತ್ತ ಸರಿದು ಹುಡುಕಬೇಕಾಗಿರು ವಿಷಯ ಬಿಟ್ಟು ಬೇರೆಕಡೆ ಗಮನ ಹರಿಸುವಂತೆ ಮಾಡುತ್ತದೆ ಮತ್ತು ನಿಧಾನಗತಿಯ ಸಂಪರ್ಕಗಳಿಗೆ ಹೆಚ್ಚು ಉಪಯುಕ್ತವಾಗಲಾರದು ಎಂಬ ಮಾತುಗಳು ಕೇಳಿಬರುತ್ತಿದ್ದರು ಇದೊಂದು ಅದ್ಭುತ ಆವಿಷ್ಕಾರವೇ ಸರಿ!

ಸೋಮವಾರ, ಸೆಪ್ಟೆಂಬರ್ 6, 2010

ವೋಯಜರ್-1 ವ್ಯೋಮ ನೌಕೆ ಸುಮಾರು 4 ಬಿಲಿಯನ್ ಮೈಲಿಗಗಳ(64 ಕೋಟಿ ಕಿ ಮೀ ) ದೂರದಿಂದ ತೆಗೆದ ಭೂಮಿಯ ಚಿತ್ರ

ಇದೆ ನೋಡಿ ನಮ್ಮ ಭೂಮಿ .... ವೋಯಜರ್-1 ವ್ಯೋಮ ನೌಕೆಯಿಂದ ತೆಗೆದ ಚಿತ್ರ (ಸುಮಾರು 4 ಬಿಲಿಯನ್ ಮೈಲಿಗಗಳ(64 ಕೋಟಿ ಕಿ ಮೀ ) ದೂರದಿಂದ... ಸೌರಮಂಡಲದ ಕೊನೆಯ ಅಂಚಿನಿಂದ ಸೂರ್ಯ ಕಿರಣಗಳ ನಡುವೆ ಕಾಣುತ್ಥಿರುವ ಸೂಕ್ಷ್ಮ ತೆಳು ನೀಲಿ ಚುಕ್ಕೆಯನ್ನೊಮ್ಮೆ ನೋಡಿ... ಅದೇ ನಾವು... ನಮ್ಮ ಭೂಮಿ.... ನಮ್ಮೆಲ್ಲರ ಮನೆ.... ನಾವೆಲ್ಲರಿರುವುದು ಆ ಚುಕ್ಕಿಯ ಮೇಲೆ... ನೀವು ಇಷ್ಟಪಟ್ಟವರು ..ನಿಮಗೆ ತಿಳಿದಿರುವವರು...ನೀವು ಕೇಳಿರುವವರು.. ಎಲ್ಲರೂ ಬಾಳಿ ಬದುಕಿದ ಜಾಗ ... ಇತಿಹಾಸದಲ್ಲಿನ ಎಲ್ಲಾ ಸುಖ ದುಃಖ ನೋವು ನಲಿವುಗಳು.. ಸಾವಿರಾರು ತತ್ತ್ವ ಚಿಂತನೆಗಳು, ಜಾತಿ ಧರ್ಮಗಳು ,ಆರ್ಥಿಕ ನೀತಿ ಗಳು.. ಎಲ್ಲಾ ನಾಯಕರು... ಹೇಡಿಗಳು... ಪ್ರತಿಯೊಂದು ನಾಗರಿಕತೆಯ ನಿರ್ಮಾತೃಗಳು ಕೆಡುಕರು .. ಎಲ್ಲಾ ಚಕ್ರವರ್ತಿಗಳು ... ಗುಲಾಮರು ... ರೈತರು .. ಅಮರ ಪ್ರೇಮಿಗಳು.. ಆಶಾದಾಯಕ ಮಕ್ಕಳು.. ತಾಯಿ ತಂದೆಯರು.. ಪ್ರತಿಯೊಬ್ಬ ಸಂಶೋದಕ ಅನ್ವೇಷಕರು .. ನೀತಿ ಭೋದಕರು ... ಪ್ರತಿಯೊಬ್ಬ ಭ್ರಷ್ಟ ರಾಜಕಾರಣಿಗಳು ... ನಟರು ... ಮಹಾನ್ ನಾಯಕರು .. ಮಹಾನ್ ಪಾಪಿಗಳು .. ಸಂತರು ಬಾಳಿ ಬದುಕಿದ ಜಾಗ ...

ನಮ್ಮ ಭೂಮಿ ಬೃಹತ್ ಬ್ರಮ್ಮಾಂಡದ ಅತಿ ಸಣ್ಣ ಕಣ... ಈ ಸಣ್ಣ ಚುಕ್ಕಿಯ ಯಾವುದೋ ಮೂಲೆಯಲ್ಲಿನ ಕ್ಷಣಕಾಲದ ಒಡೆತನಕಾಗಿ ರಕ್ತದ ಕೋಡಿ ಹರಿಸಿದ ... ಸಾಮ್ರಾಜ್ಯ ಶಾಹಿ ಚಕ್ರವರ್ತಿಗಳು .. ಸೇನಾಧಿಪತಿಗಳು... ರಾಷ್ಟ್ರನಾಯಕರು ... ಪ್ರಧಾನಿಗಳ ಬಗ್ಗೆ ಒಮ್ಮೆ ಯೋಚಿಸಿ... ಈ ಚಿಕ್ಕಿಯ ಒಂದು ಭಾಗದ ಜನರು ಗುರುತಿಸಲೆ ಆಗದ ಚುಕ್ಕಿಯ ಮತ್ತೊಂದು ಭಾಗದ ಜನರ ಮೇಲೆ ನಡೆಸಿದ ಕೊನೆಇಲ್ಲದ ಕ್ರ್ರೋರ ಕೃತ್ಯಗಳು .. ಅದೆಷ್ಟು ನಿರಂತರ ಅಪನಂಬಿಕೆಗಳು ... ಒಬ್ಬರನ್ನೊಬ್ಬರು ಕೊಲ್ಲಲು ಅದೆಷ್ಟು ತವಕ ದ್ವೇಷ ...
ನಮ್ಮ ನಿಲುವುಗಳನ್ನು ... ನಾವು ಕಲ್ಪಿಸಿಕೊಂಡಿದ್ದ ಸ್ವಪ್ರತಿಷ್ಠೆಯನ್ನು ... ಬ್ರಹ್ಮಾಂಡದಲ್ಲೊಂದು ವಿಶೇಷವಾದ ಸ್ಥಾನ ನಮಗಿದೆ ಎಂದುಕೊಂಡಿದ್ದ ಮರಳುತನವನ್ನ ಪ್ರಶ್ನಿಸುವಂತಿದೆ ಮಸುಕಾದ ಕಿರಣದೊಳಗಿನ ಈ ಬಿಂದು ...

ನಮ್ಮ ಗ್ರಹ ಬೃಹತ್ ಬ್ರಹ್ಮಾಂಡದ ಅಂಧಕಾರದಲ್ಲಿ ಆವರಿಸಲ್ಪಟ್ಟಿರುವ ಅತಿ ಸೂಕ್ಸ್ಮ ಚೂರು ... ಈ ನಮ್ಮ ಸಂದಿಗ್ಧವಾದ ಸ್ಥಿತಿ .. ಹೊರಗಿನ ವಿಸ್ತಾರ ಜಗತ್ತು ನೋಡಿದರೆ ... ನಮ್ಮನ್ನು ನಮ್ಮವರಿಂದ ಉಳಿಸಲು ಯಾರಾದರೂ ಬರುತಾರೆಯೇ ಎಂಬ ಸುಳಿವು ಕೂಡ ಇಲ್ಲ...
-ಕಾರ್ಲ್ ಸಗನ್
(ಕಾರ್ಲ್ ಸಗನ್ ಅವರ ಬರಹದ ಕನ್ನಡಾನುವಾದ - ಚಂದ್ರು )

ಭಾನುವಾರ, ಸೆಪ್ಟೆಂಬರ್ 5, 2010

ಅಮೆರಿಕ ಲೈಫು ಇಷ್ಟೇನೆ ...!

ತಿಂಗಳ ಕೊನೆಯ ಡಾಲರಿಗಾಗಿ
ವಾರ ಪೂರ್ತಿ ಯಾರಿಗೋ ದುಡಿದು
ವೀಕೆಂಡ್ ಶಾಪಿಂಗ್ ವಾಶಿಂಗ್ ಮಾಡಿ
ಪಾರ್ಟಿ ಕ್ಲಬ್ಬಿನ ಲೋಕವ ಸೇರು
ಲೈಫು ಇಷ್ಟೇನೆ ...!

ವಾಲ್ಮಾರ್ಟ್ ಟಾರ್ಗೆಟ್ ಬೆಷ್ಟ್ ಬೈ ಸುತ್ತು
ಡಾಲರ್ ಜೊತೆಗೆ ರೂಪಾಯಿ ಗುಣಿಸು
ಆರ್ಕುಟ್ ಫೇಸ್ಬುಕ್ ಸ್ಕೈಪನೆ ಜಪಿಸಿ
ಲ್ಯಾಪ್-ಟಾಪ್ ಅಲ್ಲೇ ಜೀವನ ಮುಗಿಸು
ಲೈಫು ಇಷ್ಟೇನೆ ...!

ಮಸಾಲೆ ಊಟವ ಮನದಲೆ ನೆನೆದು
ಬರ್ಗರ್ ಚೀಸು ಕಣ್ಣ್ಮುಚ್ಚಿ ತಿಂದು
ನೀರಿನ ಬದಲು ಕೂಕನೆ ಕುಡಿದು
ಬೊಜ್ಜು ತುಂಬಿದ ಹೊಟ್ಟೆಯ ನೋಡು
ಲೈಫು ಇಷ್ಟೇನೆ ...!

ರೋಡು ಕಾರು ಆರಾಮು ನೋಡಿ
ನಮ್ ದೇಶಾನ ಉದ್ದಕ್ಕೂ ತೆಗಳು
ಟ್ರಾಫಿಕ್ ಅಲ್ಲಿ ಟಿಕೇಟು ಸಿಕ್ರೆ
ನಮ್ಮೊರ್ ಮಾಮನೆ ಸರಿ ಅಂತ ಹೊಗಳು
ಲೈಫು ಇಷ್ಟೇನೆ ...!

ಲಾಂಗ್ ವೀಕೆಂಡ್ಗೆ ಲಾಂಗ್ ಲಾಂಗ್ ಪ್ಲಾನು
ಮೂರ್ ದಿನದಲ್ಲಿ ಆರೂರ್ ಸುತ್ತು
ನಮ್ ದೇಶಾನೇ ಸರಿಯಾಗಿ ನೋಡ್ದೆ
ಅಮೆರಿಕ ಮಾತ್ರ ಪೂರ್ತಿ ನೋಡ್ಕೋ
ಲೈಫು ಇಷ್ಟೇನೆ...!

ಫೋನು ಕ್ಯಾಮೆರಾ ಡೀಲ್ಅಲ್ಲಿ ಮುಳುಗು
ಬೇಕೋ ಬೇಡವೋ ಎಲ್ಲಾನು ಕೊಂಡ್ಕೋ
ಹಾಗು ಹೀಗೂ ಇಂಡಿಯಾಗೆ ಸೇರ್ಸು
ಎಲ್ಲಾರ್ಗೂ ಹಂಚಿ ದೊಡ್ಡತನ ತೋರ್ಸು
ಲೈಫು ಇಷ್ಟೇನೆ ...!

-ಚಂದ್ರು

ಶನಿವಾರ, ಜೂನ್ 26, 2010

ಫೇಸ್ ಬುಕ್ ಕನ್ನಡ ಗೊಳಿಸಲು ಸಹಕರಿಸಿ....

ನಮಸ್ಕಾರ,
ನಿಮಗೆಲ್ಲ ತಿಳಿದಿರಬಹುದು 'ಫೇಸ್ ಬುಕ್ ' ಜಾಲತಾಣ ಹೆಚ್ಚು ಜನರನ್ನು ತಲುಪಲು ತನ್ನ ಸೇವೆಯನ್ನು ಜಗತ್ತಿನ 75ಕ್ಕೂ ಹೆಚ್ಚು ಭಾಷೆಗಳಿಗೆ ವಿಸ್ತರಿಸಿದೆ.. ಇದರಲ್ಲಿ ಕನ್ನಡವೂ ಒಂದು... ಭಾಷೆಗಳ ಅನುವಾದವನ್ನು ಫೇಸ್ ಬುಕ್ ತನ್ನ ಬಳಕೆದಾರರಿಂದಲೇ ಮಾಡಿಸುತ್ತಿದೆ.


ಬಳಕೆದಾರರು ತಮಗೆ ಆಸಕ್ತಿಇರುವ ಭಾಷೆ ಯನ್ನು ಬಳಸಿ 'ಫೇಸ್ ಬುಕ್' ಪಟ್ಟಿ ಮಾಡಿರುವ ಪದಗಳನ್ನು ಅನುವಾದಿಸಬಹುದು ಅಥವಾ ಈಗಾಗಲೇ ಅನುವಾದಗೊಂಡಿರುವ ಪದಗಳ ಬಗ್ಗೆ ತಮ್ಮ ಅಭಿಮತ ತಿಳಿಸಬಹುದು. ಜಾಲತಾಣದ ಒಳಗಿನ ತಂತ್ರಾಂಶ ಈ ಎಲ್ಲ ಅನುವಾದಗಳನ್ನು ಮತ್ತು ಪ್ರತಿಕ್ರಿಯೆಗಳನ್ನು ವಿಮರ್ಶಿಸಿ ಸೂಕ್ತವಾದ ಅನುವಾದವನ್ನು ಆರಿಸುತ್ತದೆ. ಹೀಗೆ ಎಲ್ಲ ಫೇಸ್ ಬುಕ್ ಪದಗಳು ಅನುವಾದಗೊಂಡರೆ 'ಸಂಪೂರ್ಣ ಕನ್ನಡಮಯ ಫೇಸ್ ಬುಕ್'' ರೆಡಿ.

'ಫೇಸ್ ಬುಕ್'' ಪ್ರಚಾರ ಮಾಡುವುದಕ್ಕಾಗಲಿ ಅಥವಾ ಅದರಿಂದ ಕನ್ನಡಿಗರಿಗೆ ಉಪಯೋಗವಿದೆ ಅಥವಾ ಇನ್ನಾವುದೇ ಉದ್ದೇಶದಿಂದ ಇದನ್ನು ಬರೆದಿದ್ದಲ್ಲ. ಇದರ ಹಿಂದಿನ ಕಳಕಳಿ ಇಷ್ಟೇ ...

ಇಂದಿನ ದಿನಗಳಲ್ಲಿ ಅಂತರ್ಜಾಲದಲ್ಲಿ ತಾಂತ್ರಿಕವಾಗಿ ಮತ್ತು ಆರ್ಥಿಕವಾಗಿ ಬಲಾಡ್ಯವಾದ ಜಾಗತಿಕ ಜಾಲತಾಣಗಳು ತಮ್ಮ ಸೇವೆಗಳನ್ನು ಸಾದ್ಯವಾದಷ್ಟು ಭಾಷೆಗಳಲ್ಲಿ ನೀಡಿ ಹೆಚ್ಚು ಜನರನ್ನು ತಲುಪಲು ಪ್ರಯತ್ನಿಸುತ್ತಿವೆ. ಈ ಪ್ರಯತ್ನಕ್ಕೆ ಆ ಸಂಸ್ಥೆಗಳು ಪರಿಗಣಿಸುವುದು  'ಎಷ್ಟು ಮಂದಿ ಆ ಭಾಷೆಯನ್ನು ಅಂತರ್ಜಾಲದಲ್ಲಿ ಬಳಸಬಹುದು' ಎಂಬ ಅಂಶ. ಈ ಕೆಲಸದಲ್ಲಿ ನಾವು ಹಿಂದೆ ಬಿದ್ದರೆ ನಮ್ಮ ಅಕ್ಕ ಪಕ್ಕದ ಭಾಷೆಗಳು ಅಂತರ್ಜಾಲದಲ್ಲಿ ನಮ್ಮ ಕನ್ನಡಕ್ಕಿಂತ ಮೇಲುಗೈ ಸಾಧಿಸುತ್ತವೆ(ಸಾಧಿಸಿವೆ). ಹೀಗಾದಲ್ಲಿ ಜಾಗತಿಕವಾಗಿ ಬಲಾಡ್ಯವಾದ ಸಂಸ್ಥೆಗಳು ಸಹಜವಾಗಿ ಕನ್ನಡವನ್ನು ಅಂತರ್ಜಾಲದಲ್ಲಿ ಬೆಳೆಸುವುದರ ಬಗ್ಗೆ ನಿರ್ಲಕ್ಷ ತಾಳುತ್ತವೆ (ನಿರ್ಲಕ್ಷಿಸಿವೆ). ಏಕೆಂದರೆ ಎಲ್ಲ ಅಂತರ್ಜಾಲ ಅಭಿವೃದ್ಧಿ ಕೆಲಸಗಳು 'ಎಷ್ಟು ಜನ ಬಳಸುತ್ತಾರೆ/ಬಳಸುತ್ತಿದ್ದಾರೆ ' ಎಂಬ ಅಂಕಿ ಅಂಶದ ಮೇಲೆ ನಿಂತಿವೆ. ಯಾವ ಭಾಷೆ ಅಂತರ್ಜಾಲದಲ್ಲಿ ಹೆಚ್ಚು ಉಪಯೋಗಿಸಲ್ಪಡುತ್ತದೋ ಆ ಭಾಷೆ ಉಳಿಯುತ್ತದೆ ಮತ್ತು ಬೆಳೆಯುತ್ತದೆ ಇಲ್ಲವಾದಲ್ಲಿ, ಅಂತಹ ಯಾವುದೇ ಜಾಗತಿಕ ಜಾಲತಾಣಗಳು ಅದರ ಅಭಿವೃದ್ದಿಗೆ ಗಮನ ನೀಡದೆ ಅಂತರ್ಜಾಲದಲ್ಲಿ ನಶಿಸಿ ಹೋಗಬಹುದು. ಇದಕ್ಕೆ ಕೆಲವು ಉದಾಹರಣೆಗಳು

೧-ಗೂಗಲ್ ನ್ಯೂಸ್ , ದಕ್ಷಿಣ ಭಾರತದ ಎಲ್ಲ ಭಾಷೆ ಗಳಲ್ಲಿ ಲಬ್ಯವಿದೆ ಕನ್ನಡದಲ್ಲಿ ಇಲ್ಲ ... ಕಾರಣ - ಕನ್ನಡ ವಾರ್ತೆ ಅನ್ನು ಅಂತರ್ಜಾಲದಲ್ಲಿ ಓದುವವರು ಕಡಿಮೆ.

೨- 'ಫೇಸ್ ಬುಕ್ ' - ದಕ್ಷಿಣ ಭಾರತದ ಎಲ್ಲ ಭಾಷೆ ಗಳಳಲ್ಲಿ ಸಂಪೂರ್ಣ ಅನುವಾದಗೊಂಡಿದೆ ಹಾಗು ಉಪಯೋಗಕ್ಕೆ ಲಬ್ಯವಿದೆ. ಕನ್ನಡ ಕೇವಲ ೩೦% ಮಾತ್ರ ಅನುವಾದಗೊಂಡಿದೆ - ಕಾರಣ ಕನ್ನಡ ಫೇಸ್-ಬುಕ್ ಅನುವಾದಕರು ಮತ್ತು ಅಭಿಮತ ನೀಡಿರುವವರು ಕಡಿಮೆ.

೩- ದಕ್ಷಿಣ ಭಾರತದ ಪ್ರತಿಯೊಂದು ಭಾಷೆಯೂ ಸಾವಿರಾರು ಜಾಲತಾಣಗಳು/ಬ್ಲಾಗ್ /ಸಿನಿಮಾ/ಟೀವಿ/ವಾರ್ತೆ/ವ್ಯಾಪಾರ/ವಿದೇಶಿಸಂಘ ಗಳ ಜಾಲತಾಣಗಳನ್ನು ಗಳನ್ನೂ ಹೊಂದಿವೆ ಅವುಗಳಿಗೆ ಸಂಖ್ಯೆಗೆ ಹೋಲಿಸಿದರೆ ಕನ್ನಡ ಜಾಲತಾಣಗಳ ಸಂಖ್ಯೆ ಭಯ ಹುಟ್ಟಿಸುವಷ್ಟು ಕಡಿಮೆ. ಕಾರಣ ಅಂತರ್ಜಾಲದಲ್ಲಿ ಕನ್ನಡ ಬಳಸುವವರ ಸಂಖ್ಯೆ ಕಡಿಮೆ.

ಹೀಗೆ ಹೇಳುತ್ತಾ ಹೋದರೆ ಹಲವಾರು . ಆದ್ದರಿಂದ 'ಅಂತರ್ಜಾಲದಲ್ಲಿ ಕನ್ನಡ ಕ್ರಾಂತಿಗೆ' ಇದು ಸೂಕ್ತ ಕಾಲ.

ಸದ್ಯಕ್ಕೆ ಫೇಸ್ ಬುಕ್ ಕನ್ನಡ ಗೊಳಿಸುವುದರ ಮೂಲಕ 'ಅಂತರ್ಜಾಲದಲ್ಲಿ ಕನ್ನಡ ಕ್ರಾಂತಿಯನ್ನು' ಪ್ರಾರಂಬಿಸೋಣ.

ಫೇಸ್ ಬುಕ್ ಪದಗಳ ಅನುವಾದ ಮಾಡಲು ಅಥವಾ ಅಬಿಮತ ನೀಡಲು ...

*ನಿಮ್ಮ ಫೇಸ್ ಬುಕ್ ಖಾತೆಗೆ ಸೈನ್ ಇನ್ ಮಾಡಿ. (ಖಾತೆ ಇಲ್ಲದಿದ್ದರೆ , ಹೊಸ ಖಾತೆ ತೆಗೆಯುವುದು ೧ ನಿಮಿಷದ ಕೆಲಸ)
*ಈ ಕೆಳಗಿನ ಕೊಂಡಿಗೆ ಹೋಗಿ http://www.facebook.com/home.php?#!/translations/?ref=ts
ಇಲ್ಲಿ ಪುಟದ ಬಲಗಡೆ ಇರೋ Translation Links ಅನ್ನೋ ಭಾಗಕ್ಕೆ ಹೋಗಿ, ಅಲ್ಲಿ ಭಾಷೆ ಆಯ್ಕೆಯ ಅನುಕೂಲ ಬಳಸಿ "ಕನ್ನಡ" ಆಯ್ದುಕೊಳ್ಳಿ - (ಕೊನೆ ಇಂದ ಎರಡನೇ ಆಯ್ಕೆ)
*ಅನುವಾದ ಶುರುಮಾಡಿ ( ಕನ್ನಡ ದಲ್ಲಿ ಬರೆಯಲು ಈ ಕೊಂಡಿ ಬಳಸಬಹುದು - http://www.google.com/transliterate/ )
*ಅನುವಾದದಲ್ಲಿ ಆಸಕ್ತಿ ಇಲ್ಲದಿದ್ದರೆ - ಈಗಾಗಲೇ ಅನುವಾದಗೊಂಡಿರುವ ಪದಗಳಿಗೆ ನಿಮ್ಮ ಅಭಿಮತ (ಸರಿ/ತಪ್ಪು) ತಿಳಿಸಿ (vote up or vote down) ಮಾಡಬಹುದು.

ಹೆಚ್ಹಿನ ವಿವರಗಳು ಬೇಕಿದ್ದರೆ ಮತ್ತು ಕನ್ನಡ ಅನುವಾದದಲ್ಲಿ ಆಸಕ್ತಿ ಇದ್ದರೆ ತಿಳಿಸಿ... ಹಲವಾರು ಜಾಲತಾಣಗಳು ಹವ್ಯಾಸಿ ಕನ್ನಡ ಅನುವಾದಕರಿಗಾಗಿ ಕಾಯುತ್ತಿದೆ. ನಿಮ್ಮ ಹವ್ಯಾಸ ಮತ್ತು ದಿನದ ಒಂದೆರಡು ನಿಮಿಷಗಳು ಕನ್ನಡವನ್ನು ಅಂತರ್ಜಾಲದಲ್ಲಿ ಬೆಳಗಲು ಸಹಕಾರಿಯಾಗಬಹುದು.. ನಿಮ್ಮ ಪ್ರತಿಯೊಂದು ಕನ್ನಡ ಕ್ಲಿಕ್ 'ಅಂತರ್ಜಾಲದಲ್ಲಿ ಕನ್ನಡ ಕ್ರಾಂತಿಗೆ' ಅಳಿಲುಸೇವೆ ಯಾಗಬಹುದು....

ಕನ್ನಡಕ್ಕಾಗಿ ನಿಸ್ವಾರ್ಥ ಮತ್ತು ತೆರೆಮರೆಯ ಸೇವೆಯಲ್ಲಿ ತೊಡಗಿರುವವರ ಕೆಲವು ಕೊಂಡಿಗಳು ...
http://www.banavasibalaga.org/
http://enguru.blogspot.com/
http://karnatique.blogspot.com/
http://sampada.net/
http://www.kendasampige.com/
http://kn.wikipedia.org/

ಇನ್ನು ಹೆಚ್ಚಿನ ಆಸಕ್ತಿ ಇದ್ದರೆ ತಿಳಿಸಿ, ಇಂಥಹ ನೂರಾರು ವಿಷಯಗಳ ಬಗ್ಗೆ ಪ್ರತಿದಿನ ಕೆಲಸಮಾಡುತ್ತಿರುವ banavasi_it_kannadigaru@googlegroups.com ಸೇರಿ

ಮಂಗಳವಾರ, ಜೂನ್ 22, 2010

ಬೀchi ಯವರ ತಿಮ್ಮರಸಾಯನದ ಆಯ್ದ ಕನ್ನಡ ಸಮಾನ ಪದಗಳು

ಸ್ವಭಾವ - ಸ್ವಂತ ಅಕ್ಕನ ಸ್ವಂತ ಭಾವ
ಅರ್ಜುನ - ಅರ್ಜಿಯನ್ನು ಹಾಕಿ ಕುಳಿತವನೇ ಅರ್ಜುನ

ಅಡಿಯಾಳು - ಒಂದೇ ಅಡಿ ಎತ್ತರವಿರುವ ಆಳು!

ಅತಿಥಿ - ತಿಥಿ ವಾರಗಳ ನಿಯಮವಿಲ್ಲದೇ ಊಟಕ್ಕೆ ಬರುವವರು

ಅರ್ಥೇಚಾ - ಹಣ ಕೊಟ್ಟು ಕೊಂಡ ಚಹಾ

ಅನುಭವ - ಹಳೆಯ ತಪ್ಪಿಗೆ ಜಾಣರು ಕೊಡುವ ಹೊಸ ಹೆಸರು

ಅಮರ ಕೃತಿ - ಮಾರಾಟವಾಗದ ಗೃಂಥ

ಅರಸ - ರಸಿಕನಲ್ಲದವನೇ ಅರಸ!

ಋಷಿ - ರೋಷ ಉಳ್ಳವನೇ ಋಷಿ!

ಭಾವಜೀವಿ - ಭಾವನ ಮನೆಯಲ್ಲಿ ವಾಸವಾಗಿರುವವನೇ ಭಾವ ಜೀವಿ

ಸೋಮವಾರ, ಮೇ 3, 2010

ಒಂದೆರೆಡು ಸಾಲಿನ ಕತೆಗಳು.


——————————————————–
ಶೆಟ್ಟರ ಅಂಗಡಿಯಲ್ಲಿ ಶಾಪಿಂಗ್ ಮಾಡುತ್ತಿದ್ದ ಗಂಡನಿಗೆ, ತನ್ನ ಹೆಂಡತಿಯ ಗಲ್ಲದ ನೆನಪಾಗಿ, ನಾಚಿ ನೀರಾಗಿ, ಬೆಲ್ಲ ತರುವುದು ಮರೆತುಬಿಟ್ಟ.
——————————————————–
ಅಮ್ಮನಿಗೀಗಾಗಲೇ ಅರ್ಜೆಂಟ್ ಕಾಶಿಗೆ ಹೋಗಬೇಕಾಗಿದೆ. ದೇವರ ಮನೆಯಲ್ಲಿರುವ ಹಳೆಯ ಡಬ್ಬಿಗೆ ಅಗಾಗ ಒಂದೆರೆಡು ರೂಪಾಯಿಗಳನ್ನ ತುಂಬುತ್ತಿದ್ದಾಳೆ ಅದರೂ ತುಂಬುತ್ತಿಲ್ಲ..ಮಗ ಎಮ್ ಎನ್ ಸಿ ಕಂಪನಿಯ ನೌಕರನಂತೆ.
——————————————————–
ನಾಲ್ಕು ಹೆಜ್ಜೆಗಳು ಒಟ್ಟಿಗೆ ಹೋಗಬೇಕು ಅಂತ ಎರೆಡು ಹೆಜ್ಜೆಗಳು ಬಯಸಿದ್ದವು. ಎರೆಡು ಹೆಜ್ಜೆಗಳು
ಒಪ್ಪಲಿಲ್ಲ.ಕೊನೆಗೆ ನಾಲ್ಕೂ ಹೆಜ್ಜೆಗಳು ಅನಾಥವಾದವಂತೆ.
——————————————————–
ಗೆಳೆಯ ಗೆಳತಿ ಬೆಟ್ಟು ಕಟ್ಟಿದರು.ಚಳಿಗಾಲ ಬೆಚ್ಚಗಿರುತ್ತೆ ಅಂದ ಗೆಳೆಯ ಬೆಟ್ಟು ಗೆದ್ದುಬಿಟ್ಟ.
——————————————————–
ಒಂದು ಕತೆಯ ಪಾತ್ರಕ್ಕೆ ನ್ಯಾಯ ಸಿಕ್ಕಿಲ್ಲವಂತೆ. ನ್ಯಾಯಕ್ಕಾಗಿ ಕಾದಂಬರಿಕಾರನ ಹತ್ತಿರ ಧರಣಿ ಕೂತಿದೆ. ಕಾದಂಬರಿಕಾರ ತನ್ನ ತಾನು ಸಂತೈಸಿಕೊಳ್ಳುತ್ತಿದ್ದಾನೆ.
———————————————————
ಪ್ರೇಮಿಗಳು ಮದುವೆಯಾದರು.ಮದುವೆಯಾಗಲು ಕಾರಣರಾದ ಎಲ್ಲರನ್ನು ನೆನೆಸಿಕೊಂಡು
ಕೃತಜ್ನತೆ ಅರ್ಪಿಸಿದರು. ಆದರೆ ಯಾಕೋ ನಾಲ್ಕೂ ಕಣ್ಣುಗಳು ಧಾರಾಕಾರವಾಗಿ ಅಳುತಿದ್ದವು.
———————————————————
ಅವಳ ಗೆಜ್ಜೆ ಸದ್ಧು ಮದುವೆಯ ಮೊದಲು ಹೇಗೆ ಕೇಳಿಸುತ್ತಿತೋ ಈಗ ಹಾಗೆಲ್ಲ ಕೇಳಿಸುತ್ತಿಲ್ಲವಂತೆ.
ಗೆಜ್ಜೆ ತೆಗೆದಿಟ್ಟು ಮನೆಯಲ್ಲಿ ಒಡಾಡಬಾರದ ಅಂದು ಸಿಡುಕುತ್ತಿದ್ದಾನೆ.
———————————————————
ಒಂದೂರಲ್ಲಿ ಒಂದು ಹುಡುಗನಿದ್ದ. ಮದುವೆಯಾದ. ಒಂದು ತಿಂಗಳು ಹನಿಮೂನು ಮುಗಿಸಿಕೊಂಡುಬಂದ.
ಅದೇ ಊರಿನಲ್ಲಿ ಒಂದು ಮುದ್ದಾದ ಹುಡುಗಿ.ಆ ಹುಡುಗಿಯ ಆತ್ಮಕ್ಕೂ ಒಂದು ತಿಂಗಳಾಗಿತ್ತು.
———————————————————-
ಇದು ನಿನಗೆ ನಾನು ಬರೆಯುತ್ತಿರುವ ಕೊನೆಯ ಪತ್ರ ಅನ್ನುವ ಪತ್ರ ಅವಳಿಗೆ ಸಿಕ್ಕಿದ್ದು ಒಂದರ ಹಿಂದೊಂದು ಜೋಡಿಸಿಟ್ಟ ಅವನ ೫೦೦ ಪ್ರೇಮ ಪತ್ರಗಳ ಅಡಿಯಲ್ಲಂತೆ.
———————————————————–
ಅವನು ಡಿವೋರ್ಸ್ ತಗೊತೀನಿ ಅಂತ ತಮಾಷೆಗೆ ಅಂದ. ಇವಳು ದೇವರ ಮುಂದೆ ಹಣತೆ ಹಚ್ಚಿಟ್ಟು
ನಿಜಕ್ಕೂ ಅತ್ತಿದ್ದಳೂ ಅನ್ನುವುದಕ್ಕೆ ಸಾಕ್ಷಿಯಾಗಿ ಹಣತೆಯಾರಿತ್ತು.ಅಲ್ಲಿ ಅವಳ ಕಣ್ಣೀರಿತ್ತು

(Source - An email)


ಶನಿವಾರ, ಫೆಬ್ರವರಿ 27, 2010

ಎಲ್ಲಾದರು ಇರು ಎಂತಾದರು ಇರು

ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗು ನೀ ಕನ್ನಡವಾಗಿರು
ಮೈಸೂರು ಮಮತೆಯ ಮರೆಯದಿರು
ಮದ್ರಾಸು ಬಿಸಿಲ ನೆನೆಯದಿರು

ತೆರೆದಿಡು ನೆನಪುಗಳ ಕಂತೆ
ಕಟ್ಟದಿರು ಚಿಂತೆಗಳ ಸಂತೆ
ಸದಾ ನಗುತಿರು ಎಲ್ಲರಂತೆ
ನಿನ್ನತನಕ್ಕೆ ಕುಂದುಬರದಂತೆ

ದ್ವಂದ್ವಗಳಿಗಿರಲಿ ಪೂರ್ಣ ವಿರಾಮ
ನೋವುಗಳಿಗಿರಲಿ ಅರ್ಧ ವಿರಾಮ
ಭಾವನೆಗಳಿಗಿರಲಿ ಅಲ್ಪ ವಿರಾಮ
ಸಂತೋಷಕ್ಕಿರದಿರಲಿ ವಿರಾಮ

ಸದಾ ನಗುತ್ತಿರು
ಸದಾ ನಲಿಯುತ್ತಿರು
ಅಗಾಗ ನೆನೆಯುತ್ತಿರು
ನೆನೆದಾಗ ಬರೆಯುತ್ತಿರು!