ನಾನು ಓದುತ್ತಿದ್ದಾಗ ನಮ್ಮೂರಿನಲ್ಲಿ ಇದ್ದಿದ್ದು ಕೇವಲ ಪ್ರಾಥಮಿಕ ಶಾಲೆ ಮಾತ್ರ ... ೬ ರಿಂದ ೧೦ ನೆ ತರಗತಿವರೆಗೆ ಓದಲು ಪಕ್ಕದ ಊರಿಗೆ ೬ ಮೈಲಿ ನಡೆದು ಹೋಗಬೇಕಿತ್ತು... ಸುತ್ತಮುತ್ತಲಿನ ಹತ್ತಿಪ್ಪತ್ತು ಹಳ್ಳಿಗಳಿಗೆ... ಒಂದೇ ಒಂದು ಪ್ರೌಢ ಶಾಲೆ... ಸಾವಿರಾರು ಮಂದಿಗೆ ಭವಿಷ್ಯ ರೂಪಿಸಿದ ಪ್ರೌಢ ಶಾಲೆ ಈಗ ಜೊತೆಗೆ ಪ್ರಥಮ ದರ್ಜೆ ಕಾಲೇಜು ಸೇರಿಕೊಂಡಿದೆ. ನನ್ನ ಈ ಬರಹದ ಕಾರಣ ಪ್ರೌಢಶಾಲೆಯಲ್ಲ ನನ್ನೂರಿನ ಪ್ರಾಥಮಿಕ ಶಾಲೆ....
ಬಸ್ಸಿಲ್ಲದ ನನ್ನೂರಿಗೆ ಎರಡು ವರ್ಷಗಳಿಂದ ಬಸ್ಸು ಸೇವೆ ಶುರುವಾಗಿದೆ, ಇದು ಊರಿಗೆ ವರವಾದರೆ ಶಿಕ್ಷಣಕ್ಕೆ ಎರವಾಗಿ ಪರಿಣಮಿಸಿದೆ. ಮಕ್ಕಳಿಗೆ ಕಾನ್ವೆಂಟ್ ಮತ್ತು ಆಂಗ್ಲ ಶಿಕ್ಷಣವೆ ದಾರಿ ದೀಪ ಎಂಬ ತಪ್ಪು ಕಲ್ಪನೆ, ಕೆಲವೊಮ್ಮೆ ಪ್ರತಿಷ್ಠೆ ಮತ್ತು ಅಜ್ಞಾನದಿಂದ ಎಲ್ಲ ಮಕ್ಕಳನ್ನು ಹತ್ತಿರದ ನಗರಕ್ಕೆ ಕಳುಹಿಸುತ್ತಿರುವ ವಿಷಯ ತಿಳಿದು ಬಹಳ ಬೇಸರ ತರಿಸಿದೆ. ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ... ಮುಂಬರುವ ದಿನಗಳಲ್ಲಿ ಮಾಧ್ಯಮಿಕ ಮತ್ತು ಪ್ರೌಢ ಶಾಲೆಗಳಿಗೂ ಇದೆ ಗತಿ.
ಇಲ್ಲಿ ನನಗೆ ಕಾಣಿಸುತ್ತಿರುವುದು, ಜನರಲ್ಲಿ ಅರಿವಿನ ಕೊರತೆ, ಮಕ್ಕಳಿಗೆ ಕನಿಷ್ಠ ಪಕ್ಷ ಪ್ರಾಥಮಿಕ ಶಿಕ್ಷಣ ಕನ್ನಡದಲ್ಲಿ ಕೊಡಿಸುವುದರ ಅಗತ್ಯತೆ, ಕನ್ನಡದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಮಕ್ಕಳ ಬುದ್ದಿಮತ್ಯೆ ಮತ್ತೆ ಗ್ರಹಿಸುವ ಶಕ್ತಿ ಹೆಚ್ಕಾಗುವುದರ ಅರಿವು.... ಕನ್ನಡ ಮಾದ್ಯಮದಲ್ಲಿ ಓದಿದರೂ ಮುಂದೆ ಒಳ್ಳೆಯ ಉದ್ಯೋಗಾವಕಾಶಗಳು ದೊರೆಯುತ್ತವೆ ಎಂಬ ನಂಬಿಕೆ.. ಕನ್ನಡ ಮಾದ್ಯಮದಲ್ಲಿ ಓದಿ ಸಾದಿಸಿದವರ ಉದಾಹರಣೆಗಳು ... ಇವೆಲ್ಲ ಸಮಾಜದ ಮನದಲ್ಲಿ ಮೂಡದಿದ್ದರೆ.... ಸರ್ಕಾರಿ ಕನ್ನಡ ಶಾಲೆಗಳ ಜೊತೆಗೆ ಕನ್ನಡ ಭಾಷೆ ಕೂಡ ಮಾಯವಾಗುವ ಕಾಲ ದೂರವಿಲ್ಲ ಎಂದೆನಿಸುತ್ತಿದೆ...
'ಕನ್ನಡವೆ ಕಲಿಯದ ಮುಗ್ದ ಮನಸುಗಳಲ್ಲಿ ಕನ್ನಡ ಭಾವನೆಗಳು ಮೂಡಲು ಸಾದ್ಯವೇ? 'ಕನ್ನಡಕೆ ಹೋರಾಡು ಕನ್ನಡದ ಕಂದ' ಕವಿತೆಯೇನಾದರು ಕಿವಿಗೆ ಬಿದ್ದರೆ ಅಪಹಾಸ್ಯವಾಗಿ ಕಾಣದೆ ಇರುವುದೇ? 'ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು' ಈ ಕವಿನುಡಿ ಎಂದಾದರು ಕೇಳಿಸುವುದೇ? ೨೦೦೦ ವರ್ಷಗಳಿಂದ ಹುಟ್ಟಿ ಬೆಳೆದು ಬಂದ ಕನ್ನಡ, ನಮ್ಮ ಅಪ್ಪ, ಅಮ್ಮ, ತಾತ ,ಮುತ್ತಾತಂದಿರು, ಪೂರ್ವಜರು ಆಡಿ ನುಡಿದು ನಲಿಸಿದ ಕನ್ನಡ ನಮ್ಮ ಮಕ್ಕಳು ಮೊಮ್ಮಕ್ಕಳು ಮರಿಮಕ್ಕಳು ಬರುವ ಹೊತ್ತಿಗೆ ನಶಿಸಿ ಹೋಗದೆ ಇರದೇ ?
ಮಕ್ಕಳಿಗೆ ಕನಿಷ್ಠ ಪಕ್ಷ ಪ್ರಾಥಮಿಕ ಶಿಕ್ಷಣ ಕನ್ನಡದಲ್ಲಿ ಕೊಡಿಸಿ... ಈ ವಿಚಾರಗಳನ್ನ ಇತರರಿಗೂ ತಿಳಿಸಿ!