ಶನಿವಾರ, ಸೆಪ್ಟೆಂಬರ್ 18, 2010

ಗೂಗಲ್ ನ ಥಟ್ಟನೆ ಹುಡುಕು...

ಗೂಗಲ್.... 'ಹುಡುಕು' ಎಂಬ ಪದಕ್ಕೆ ಸಮಾನಾರ್ಥಕವಾಗುವಷ್ಟು ಪ್ರಭಾವಶಾಲಿಯಾಗಿ ಬೆಳೆದು ನಿಂತ ಜಾಲತಾಣ.  ಬರೆಯಲು ಒಂದು ಸಣ್ಣ  ಜಾಗ ಮತ್ತು ಒಂದು ಹುಡುಕುಗುಂಡಿ ಮಾತ್ರ ಇಟ್ಟುಕೊಂಡು ಅಂತರ್ಜಾಲದಲ್ಲಿ ಏನೆಲ್ಲಾ ಸಾಧಿಸಬಹುದು ಎಂದು ತೋರಿಸುತ್ತಿರುವ ಸಂಸ್ಥೆ...ಇದರ ಮತ್ತೊಂದು ಹೊಸ ಆವಿಷ್ಕಾರ 'ಥಟ್ಟನೆ ಹುಡುಕು' (Google Instant ).
ಹುಡುಕಬೇಕಾದ ಪದವನ್ನು ಟೈಪಿಸಲು ಶುರು ಮಾಡುತ್ತಿದ್ದಂತೆಯೇ ಫಲಿತಾಂಶಗಳನ್ನು ತೋರಿಸಲಾರಭಿಸುತ್ತದೆ. ಹುಡುಕಬೇಕಾದ ಪದ ಅಥವಾ ವಾಕ್ಯವನ್ನು ಪೂರ್ತಿಯಾಗಿ ಟೈಪ್  ಮಾಡುವ ಅಗತ್ಯವೇ ಇಲ್ಲ ಮತ್ತು  ಹುಡುಕುಗುಂಡಿಯನ್ನು ಒತ್ತುವ ಶ್ರಮವೇ ಬೇಕಿಲ್ಲ. ಜೊತೆಗೆ ನಾವು ಹುಡುಕಬೇಕಾಗಿರುವ ಪದ/ವಾಕ್ಯವನ್ನು ಕೆಲವು ಅಕ್ಷರಗಳನ್ನು ಬರೆದ ಕೂಡಲೇ ಊಹಿಸಿ ಅದಕ್ಕೆ ಸರಿಹೊಂದುವ ಫಲಿತಾಂಶಗಳನ್ನು ತೋರಿಸುತ್ತದೆ.
ಸಾಮಾನ್ಯವಾಗಿ ನಾವು ಹುಡುಕಬೇಕಾಗಿರುವುದನ್ನು ಬರೆಯಲು ಹೆಚ್ಚು ಸಮಯ ತೆಗೆದು ಕೊಳ್ಳುತ್ತದೆ ಆದರೆ ಗೂಗಲ್ ಫಲಿತಾಂಶ ಒದಗಿಸಲು ಅಷ್ಟು ಸಮಯ ತೆಗೆದುಕೊಳ್ಳುವುದಿಲ್ಲ, ಈ ಅಂಶವೇ  ' ಥಟ್ಟನೆ ಹುಡುಕು'  ಆವಿಷ್ಕಾರಕ್ಕೆ ಕಾರಣ. ಈ ಹೊಸ ವಿಧಾನದ ಮೂಲಕ ಬರೆಯಲು ಮತ್ತು ಹುಡುಕುಗುಂಡಿಯನ್ನು ಒತ್ತಲು ತೆಗೆದುಕೊಳ್ಳುವ ಸಮಯನ್ನು ಉಳಿಸಬಹುದು. ಗೂಗಲ್ ನ ಅಂದಾಜಿನ ಪ್ರಕಾರ ಈ ಹೊಸ ವಿಧಾನ ಪ್ರತೀ ಸೆಕಂಡ್ ಜಗತ್ತಿನ 11 ಮಾನವ ಗಂಟೆಗಳಷ್ಟು ಸಮಯವನ್ನು ಉಳಿಸುತ್ತದೆ ಎಂಬುದು!. ಗೂಗಲ್ ಪ್ರತಿದಿನ 1 ಬಿಲಿಯನ್ (10 ಕೋಟಿ) ಹುಡುಕಾಟಗಳನ್ನು ನಡೆಸುತ್ತದೆ, ಥಟ್ಟನೆ ಹುಡುಕು' ವಿಧಾನದ ಮೂಲಕ ಗೂಗಲ್ ಇಂದಿನ ಸಾಮರ್ಥ್ಯದ 20 ಪಟ್ಟು ಹೆಚ್ಚು ಸಾಮರ್ಥ್ಯದಿಂದ ಕೆಲಸ ಮಾಡಬೇಕಿದೆ.
ಬರೆದು ಮುಗಿಸುವ ಮೊದಲೇ ಫಲಿತಾಂಶ ಬಂದರೆ, ಗಮನ ಅತ್ತ ಸರಿದು ಹುಡುಕಬೇಕಾಗಿರು ವಿಷಯ ಬಿಟ್ಟು ಬೇರೆಕಡೆ ಗಮನ ಹರಿಸುವಂತೆ ಮಾಡುತ್ತದೆ ಮತ್ತು ನಿಧಾನಗತಿಯ ಸಂಪರ್ಕಗಳಿಗೆ ಹೆಚ್ಚು ಉಪಯುಕ್ತವಾಗಲಾರದು ಎಂಬ ಮಾತುಗಳು ಕೇಳಿಬರುತ್ತಿದ್ದರು ಇದೊಂದು ಅದ್ಭುತ ಆವಿಷ್ಕಾರವೇ ಸರಿ!

ಸೋಮವಾರ, ಸೆಪ್ಟೆಂಬರ್ 6, 2010

ವೋಯಜರ್-1 ವ್ಯೋಮ ನೌಕೆ ಸುಮಾರು 4 ಬಿಲಿಯನ್ ಮೈಲಿಗಗಳ(64 ಕೋಟಿ ಕಿ ಮೀ ) ದೂರದಿಂದ ತೆಗೆದ ಭೂಮಿಯ ಚಿತ್ರ

ಇದೆ ನೋಡಿ ನಮ್ಮ ಭೂಮಿ .... ವೋಯಜರ್-1 ವ್ಯೋಮ ನೌಕೆಯಿಂದ ತೆಗೆದ ಚಿತ್ರ (ಸುಮಾರು 4 ಬಿಲಿಯನ್ ಮೈಲಿಗಗಳ(64 ಕೋಟಿ ಕಿ ಮೀ ) ದೂರದಿಂದ... ಸೌರಮಂಡಲದ ಕೊನೆಯ ಅಂಚಿನಿಂದ ಸೂರ್ಯ ಕಿರಣಗಳ ನಡುವೆ ಕಾಣುತ್ಥಿರುವ ಸೂಕ್ಷ್ಮ ತೆಳು ನೀಲಿ ಚುಕ್ಕೆಯನ್ನೊಮ್ಮೆ ನೋಡಿ... ಅದೇ ನಾವು... ನಮ್ಮ ಭೂಮಿ.... ನಮ್ಮೆಲ್ಲರ ಮನೆ.... ನಾವೆಲ್ಲರಿರುವುದು ಆ ಚುಕ್ಕಿಯ ಮೇಲೆ... ನೀವು ಇಷ್ಟಪಟ್ಟವರು ..ನಿಮಗೆ ತಿಳಿದಿರುವವರು...ನೀವು ಕೇಳಿರುವವರು.. ಎಲ್ಲರೂ ಬಾಳಿ ಬದುಕಿದ ಜಾಗ ... ಇತಿಹಾಸದಲ್ಲಿನ ಎಲ್ಲಾ ಸುಖ ದುಃಖ ನೋವು ನಲಿವುಗಳು.. ಸಾವಿರಾರು ತತ್ತ್ವ ಚಿಂತನೆಗಳು, ಜಾತಿ ಧರ್ಮಗಳು ,ಆರ್ಥಿಕ ನೀತಿ ಗಳು.. ಎಲ್ಲಾ ನಾಯಕರು... ಹೇಡಿಗಳು... ಪ್ರತಿಯೊಂದು ನಾಗರಿಕತೆಯ ನಿರ್ಮಾತೃಗಳು ಕೆಡುಕರು .. ಎಲ್ಲಾ ಚಕ್ರವರ್ತಿಗಳು ... ಗುಲಾಮರು ... ರೈತರು .. ಅಮರ ಪ್ರೇಮಿಗಳು.. ಆಶಾದಾಯಕ ಮಕ್ಕಳು.. ತಾಯಿ ತಂದೆಯರು.. ಪ್ರತಿಯೊಬ್ಬ ಸಂಶೋದಕ ಅನ್ವೇಷಕರು .. ನೀತಿ ಭೋದಕರು ... ಪ್ರತಿಯೊಬ್ಬ ಭ್ರಷ್ಟ ರಾಜಕಾರಣಿಗಳು ... ನಟರು ... ಮಹಾನ್ ನಾಯಕರು .. ಮಹಾನ್ ಪಾಪಿಗಳು .. ಸಂತರು ಬಾಳಿ ಬದುಕಿದ ಜಾಗ ...

ನಮ್ಮ ಭೂಮಿ ಬೃಹತ್ ಬ್ರಮ್ಮಾಂಡದ ಅತಿ ಸಣ್ಣ ಕಣ... ಈ ಸಣ್ಣ ಚುಕ್ಕಿಯ ಯಾವುದೋ ಮೂಲೆಯಲ್ಲಿನ ಕ್ಷಣಕಾಲದ ಒಡೆತನಕಾಗಿ ರಕ್ತದ ಕೋಡಿ ಹರಿಸಿದ ... ಸಾಮ್ರಾಜ್ಯ ಶಾಹಿ ಚಕ್ರವರ್ತಿಗಳು .. ಸೇನಾಧಿಪತಿಗಳು... ರಾಷ್ಟ್ರನಾಯಕರು ... ಪ್ರಧಾನಿಗಳ ಬಗ್ಗೆ ಒಮ್ಮೆ ಯೋಚಿಸಿ... ಈ ಚಿಕ್ಕಿಯ ಒಂದು ಭಾಗದ ಜನರು ಗುರುತಿಸಲೆ ಆಗದ ಚುಕ್ಕಿಯ ಮತ್ತೊಂದು ಭಾಗದ ಜನರ ಮೇಲೆ ನಡೆಸಿದ ಕೊನೆಇಲ್ಲದ ಕ್ರ್ರೋರ ಕೃತ್ಯಗಳು .. ಅದೆಷ್ಟು ನಿರಂತರ ಅಪನಂಬಿಕೆಗಳು ... ಒಬ್ಬರನ್ನೊಬ್ಬರು ಕೊಲ್ಲಲು ಅದೆಷ್ಟು ತವಕ ದ್ವೇಷ ...
ನಮ್ಮ ನಿಲುವುಗಳನ್ನು ... ನಾವು ಕಲ್ಪಿಸಿಕೊಂಡಿದ್ದ ಸ್ವಪ್ರತಿಷ್ಠೆಯನ್ನು ... ಬ್ರಹ್ಮಾಂಡದಲ್ಲೊಂದು ವಿಶೇಷವಾದ ಸ್ಥಾನ ನಮಗಿದೆ ಎಂದುಕೊಂಡಿದ್ದ ಮರಳುತನವನ್ನ ಪ್ರಶ್ನಿಸುವಂತಿದೆ ಮಸುಕಾದ ಕಿರಣದೊಳಗಿನ ಈ ಬಿಂದು ...

ನಮ್ಮ ಗ್ರಹ ಬೃಹತ್ ಬ್ರಹ್ಮಾಂಡದ ಅಂಧಕಾರದಲ್ಲಿ ಆವರಿಸಲ್ಪಟ್ಟಿರುವ ಅತಿ ಸೂಕ್ಸ್ಮ ಚೂರು ... ಈ ನಮ್ಮ ಸಂದಿಗ್ಧವಾದ ಸ್ಥಿತಿ .. ಹೊರಗಿನ ವಿಸ್ತಾರ ಜಗತ್ತು ನೋಡಿದರೆ ... ನಮ್ಮನ್ನು ನಮ್ಮವರಿಂದ ಉಳಿಸಲು ಯಾರಾದರೂ ಬರುತಾರೆಯೇ ಎಂಬ ಸುಳಿವು ಕೂಡ ಇಲ್ಲ...
-ಕಾರ್ಲ್ ಸಗನ್
(ಕಾರ್ಲ್ ಸಗನ್ ಅವರ ಬರಹದ ಕನ್ನಡಾನುವಾದ - ಚಂದ್ರು )

ಭಾನುವಾರ, ಸೆಪ್ಟೆಂಬರ್ 5, 2010

ಅಮೆರಿಕ ಲೈಫು ಇಷ್ಟೇನೆ ...!

ತಿಂಗಳ ಕೊನೆಯ ಡಾಲರಿಗಾಗಿ
ವಾರ ಪೂರ್ತಿ ಯಾರಿಗೋ ದುಡಿದು
ವೀಕೆಂಡ್ ಶಾಪಿಂಗ್ ವಾಶಿಂಗ್ ಮಾಡಿ
ಪಾರ್ಟಿ ಕ್ಲಬ್ಬಿನ ಲೋಕವ ಸೇರು
ಲೈಫು ಇಷ್ಟೇನೆ ...!

ವಾಲ್ಮಾರ್ಟ್ ಟಾರ್ಗೆಟ್ ಬೆಷ್ಟ್ ಬೈ ಸುತ್ತು
ಡಾಲರ್ ಜೊತೆಗೆ ರೂಪಾಯಿ ಗುಣಿಸು
ಆರ್ಕುಟ್ ಫೇಸ್ಬುಕ್ ಸ್ಕೈಪನೆ ಜಪಿಸಿ
ಲ್ಯಾಪ್-ಟಾಪ್ ಅಲ್ಲೇ ಜೀವನ ಮುಗಿಸು
ಲೈಫು ಇಷ್ಟೇನೆ ...!

ಮಸಾಲೆ ಊಟವ ಮನದಲೆ ನೆನೆದು
ಬರ್ಗರ್ ಚೀಸು ಕಣ್ಣ್ಮುಚ್ಚಿ ತಿಂದು
ನೀರಿನ ಬದಲು ಕೂಕನೆ ಕುಡಿದು
ಬೊಜ್ಜು ತುಂಬಿದ ಹೊಟ್ಟೆಯ ನೋಡು
ಲೈಫು ಇಷ್ಟೇನೆ ...!

ರೋಡು ಕಾರು ಆರಾಮು ನೋಡಿ
ನಮ್ ದೇಶಾನ ಉದ್ದಕ್ಕೂ ತೆಗಳು
ಟ್ರಾಫಿಕ್ ಅಲ್ಲಿ ಟಿಕೇಟು ಸಿಕ್ರೆ
ನಮ್ಮೊರ್ ಮಾಮನೆ ಸರಿ ಅಂತ ಹೊಗಳು
ಲೈಫು ಇಷ್ಟೇನೆ ...!

ಲಾಂಗ್ ವೀಕೆಂಡ್ಗೆ ಲಾಂಗ್ ಲಾಂಗ್ ಪ್ಲಾನು
ಮೂರ್ ದಿನದಲ್ಲಿ ಆರೂರ್ ಸುತ್ತು
ನಮ್ ದೇಶಾನೇ ಸರಿಯಾಗಿ ನೋಡ್ದೆ
ಅಮೆರಿಕ ಮಾತ್ರ ಪೂರ್ತಿ ನೋಡ್ಕೋ
ಲೈಫು ಇಷ್ಟೇನೆ...!

ಫೋನು ಕ್ಯಾಮೆರಾ ಡೀಲ್ಅಲ್ಲಿ ಮುಳುಗು
ಬೇಕೋ ಬೇಡವೋ ಎಲ್ಲಾನು ಕೊಂಡ್ಕೋ
ಹಾಗು ಹೀಗೂ ಇಂಡಿಯಾಗೆ ಸೇರ್ಸು
ಎಲ್ಲಾರ್ಗೂ ಹಂಚಿ ದೊಡ್ಡತನ ತೋರ್ಸು
ಲೈಫು ಇಷ್ಟೇನೆ ...!

-ಚಂದ್ರು