ಡಿವಿಜಿ ಕಗ್ಗಗಳು

22) ಎಲ್ಲರೊಳಗೊಂದಾಗು

ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೇ
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ

21)ಹರಿದ ಗಾಳಿಪಟ

ಸುತ್ತಿ ಸುತ್ತುವ ಖಗವ ಗೂಡ ನೆನಪೆಳೆಯುವುದು
ಗೊತ್ತುನೂಲ್ ಪಿಡಿದಿಹುದು ದನವ ಬಯಲಿನಲಿ
ತತ್ವವೊಂದರ ಹಿಡಿತಕೊಗ್ಗದಿಹ ಬಾಳೇನು
ಕಿತ್ತ ಗಾಳಿಯ ಪಟವೋ ಮಂಕುತಿಮ್ಮ
                                                


20)ಯುಕ್ತಿ


ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ






19)ನಗು


ನಗುವು ಸಹಜದ ಧರ್ಮ; ನಗಿಸುವುದು ಪರಧರ್ಮ
ನಗುತ ಕೇಳುತ ನಗುವುದತಿಶಯದ ಧರ್ಮ
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ-
ಮಿಗೆ ನೀನು ಬೇಡಿಕೊಳೊ -ಮಂಕುತಿಮ್ಮ






18)ಸಂತತದ ಶಿಕ್ಷೆ


ಸಂತತದ ಶಿಕ್ಷೆಯಿಂ ದೀರ್ಘದಭ್ಯಾಸದಿಂ-
ದಂತರಂಗದ ಕಡಲು ಶಾಂತಿಗೊಳಲಹುದು
ಸಂತೃಪ್ತವೃತ್ತಿಯಿಂದೇಕಾಂತಸೇವೆಯಿಂ
ಸಂತಯಿಸು ಚಿತ್ತವನು -- ಮಂಕುತಿಮ್ಮ




17) ಭೋದನೆ


ಸರ್ವರುಂ ಸಾಧುಗಳೇ, ಸರ್ವರುಂ ಭೋಧಕರೆ
ಜೀವನ ಪರೀಕ್ಷೆ ಬಂದಿದಿರು ನಿಲುವನಕ
ಭಾವಮರ್ಮಂಗಳೇಳುವವಾಗ ತಳದಿಂದ
ದೇವರೇ ಗತಿಯಾಗ ಮಂಕುತಿಮ್ಮ


16) ನಂಬಿಕೆ


ನಂಬು ದೇವರ ನಂಬು , ನಂಬೆನ್ನುವುದು ಲೋಕ
ಕಂಬನಿಯನಿಡುವ ಜನ ನಂಬಲೋಲ್ಲದರೇಂ
ಹಂಬಲನೆ ತೊರೆದಂಗೆ ನಂಬಿಕೆಯ ಹಂಗೇಕೆ
ತುಂಬು ವಿರತಿಯ ಮನದಿ ಮಂಕುತಿಮ್ಮ


15) ಸೊಗದ ಮೂಲ


ಗಗನ ನೀಲಿಮೆಯೆನ್ನ ಕಣ್ಗೆ ಸೋಗವೀವಂತೆ
ಮುಗಿವ ತರುಣಿಯ ರಕ್ತ ಹಿತವೆನಿಸದೇಕೊ
ಸೊಗದ ಮೂಲವದೆಲ್ಲಿ ನೀಲದೊಳೊ ಕೆಂಪಿನೊಳೊ
ಬಗೆವೆನ್ನ ಮನಸಿನೊಳೊ ಮಂಕುತಿಮ್ಮ




14) ಜೊತೆಗಾರ


ಕಾರಿರುರೊಳಾಗಸದಿ ತಾರೆ ನೂರಿದ್ದೇನು
ದಾರಿಗನ ಕಣ್ಗೆ ಬೇಕೊಂದು ಮನೆಬೆಳಕು
ದೂರದಾ ದೈವವಂತಿರಲಿ ಮಾನುಷಸಖನ
ಕೋರುವುದು ಬಡಜೀವ ಮಂಕುತಿಮ್ಮ




13) ದುರಾಸೆ


ಬೇಕು ಬೇಕದು ಬೇಕು ಎನಗಿನ್ನೊಂದು
ಬೇಕೆನುತ ಬೊಬ್ಬಿಡುತಲಿಹ ಘಟವನಿದನು
ಏಕೆಂದು ರಚಿಸಿದನೊ ಬೊಮ್ಮನೀ ಬೇಕು ಜಪ
ಸಾಕೆನಿಪುದೆಂದಿಗೆಲೊ ಮಂಕುತಿಮ್ಮ




12) ಹೋರಾಟ


ಹೋರಾಡು ಬೀಳ್ವನ್ನಮೊಬ್ಬೊಂನ್ಟಿಯದೊಡಂ
ಧೀರಪಥವನೆ ಬೆದಕು ಸಕಲಸಮಯದೊಳಂ
ದೊರದಲಿ ಗೊಣಗುತ್ತ ಬಾಳ್ವ ಬಾಳ್ಗೇನು ಬೆಲೆ
ಹೋರಿ ಸತ್ವವ ಮೆರಸು ಮಂಕುತಿಮ್ಮ




11) ಆಹಾರ


ಅನ್ನವುಣುವಂದು ಕೇಳ್ ಅದನು ಬೇಯಿಸಿದ ನೀರ್
ನಿನ್ನ ದುಡಿತದ ಬೆವರೋ ಪರರ ಕಣ್ಣೀರೋ
ತಿನ್ನು ನೀಂ ಜಗಕೆ ತಿನಲಿತ್ತನಿತ ಮಿಕ್ಕೂಟ
ಜೀರ್ಣಿಸದು ಋಣಶೇಷ ಮಂಕುತಿಮ್ಮ




10) ರಗಳೆ


ಜಗವೆನ್ನ ಮುದ್ದಿಸದದೇಕೆಂದು ಕೊರಗದಿರು
ಮಗುವು ಪೆತ್ತರ್ಗೆ ನೀಂ ಲೋಕಕೆ ಸ್ಪರ್ದಿ
ಹೆಗಲಹೊರೆ ಹುತ್ತಿದರ್ಗೆಲ್ಲಮಿರುತಿರೆ ನಿನ್ನ
ರಗಳೆಗಾರಿಗೆ ಬಿಡುವೋ ಮಂಕುತಿಮ್ಮ




9) ಆನಂದ


ಮೌನದೊಳೊ ಮಾತಿನೊಳೊ ಹಾಸ್ಯದೊಳೊ ಹಾಡಿನೊಳೊ
ಮಾನವಂ ಪ್ರಣಯದೊಳೊ ವೀರ ವಿಜಯದೊಳೊ
ಏನೋ ಎಂತೋ ಸಮಾಧಾನಗಳನರಸುತಿಹ
ನಾನಂದವಾತ್ಮಗುಣ ಮಂಕುತಿಮ್ಮ






8)  ಭಕ್ತಿ 
ಕತ್ತಲೆಯೊಳೇನನೊ ಕಂಡು ಬೆದರಿದ ನಾಯಿ
ಎತ್ತಲೋ ಸಖನೋರ್ವನಿಹನೆಂದು ನಂಬಿ
ಕತ್ತೆತ್ತಿ ಮೋಳಿಡುತ ಬೊಗಳಿ ಹಾರಾಡುವುದು
ಭಕ್ತಿಯಂತೆ ನಮದು ಮಂಕುತಿಮ್ಮ




7) ಸ್ವ-ಪ್ರಸಂಶೆ


ಇಳೆಯಿಂದ ಮೊಳಕೆಯೊಗೆವಂದು ತಮಟೆಗಲಿಲ್ಲ
ಫಲ ಮಾಗುವಂದು ತತ್ತೂರಿ ದನಿಯಿಲ್ಲ
ಬೆಳಕೀವ ಸೂರ್ಯಚಂದ್ರರದೊಂದು ಸದ್ದಿಲ್ಲ
ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ


6) ಸಹಾಯ


ಬಳಲಿ ನೆಲದಲಿ ಮಲಗಿ ಮೈಮರೆತು ನಿದ್ರಿಪನ
ಕುಲುಕಿ ಹಾಸಿಗೆಯನರಸೆನುವುದು ಪ್ರಕೃತಿಯೆ
ಒಳಿತನೆಸಗುವೆನೆಂದು ನೆಮ್ಮದಿಯ ನುಂಗದಿರು
ಸುಲಭವಲ್ಲೊಳಿತೆಸಗೆ ಮಂಕುತಿಮ್ಮ




5 ) ಹೊಟ್ಟೆಕಿಚ್ಚು


ಹೊಟ್ಟೆಯೊಂದರ ರಗಳೆ ಸಾಲದೆಂದೇನೊ ವಿಧಿ
ಹೊಟ್ಟೆಕಿಚ್ಚಿನ ಕಿಡಿಯ ನೆಟ್ಟಿಹನು ನರನೊಳ್
ಹೊಟ್ಟೆತುಂಬಿದ ತೋಳ ಮಲಗೀತು ನೀಂ ಪರರ
ದಿಟ್ಟಿಸುತ ಕರುಬುವೆಯೊ ಮಂಕುತಿಮ್ಮ






4) ಬದುಕು


ತರಚುಗಾಯವ ಕೆರೆದು ಹುಣ್ಣನಾಗಿಪುದು ಕಪಿ
ಕೊರತೆಯೊಂದನು ನೀನು ನೆನೆನೆನೆದು ಕೆರಳಿ
ಧರೆಯೆಲ್ಲವನು ಶಪಿಸಿ ಮನದಿ ನರಕವ ನಿಲಿಸಿ
ನರಳುವುದು ಬದುಕೇನೋ ಮಂಕುತಿಮ್ಮ






3) ಜೀವನ


ಸರಿಯಾಗಲಿಲ್ಲವದು ಸರಿಯಿದಲ್ಲವೆನುತ
ಹರಡಿಕೊಳ್ಳಬೇಡ ಮುಳ್ಳನು ಹಾಸಿಗೆಯಲಿ
ಕೊರೆಯಾದೊಡೇನೊಂದು ನೆರೆದೊಡೇನಿನ್ನೊಂದು
ಒರಟು ಕೆಲಸವೋ ಬದುಕು ಮಂಕುತಿಮ್ಮ






2) ಹಳೆತನ – ಹೊಸತನ


ಹೊಸಚಿಗುರು ಹಳೆಬೇರು ಕೂಡಿರಲು ಮರ ಸೊಗಸು
ಹೊಸಯುಕ್ತಿ ಹಳೆತತ್ವದೊಡಗೂಡೆ ಧರ್ಮ
ಋಷಿವಾಕ್ಯದೊಡನೆ ವಿಜ್ಞಾನಕಲೆ ಮೇಳವಿಸೆ
ಜಸವು ಜನಜೀವನಕೆ ಮಂಕುತಿಮ್ಮ




1) ನಿರ್ಮಿತ್ರನಿರಲು ಕಲಿ


ಒರ್ವನೇ ನಿಲುವೆ ನೀನುತ್ಕಟಕ್ಷಣಗಳಲಿ
ಧರ್ಮ ಸಂಕಟಗಳಲಿ, ಜೀವಸಮರದಲಿ
ನಿರ್ವಾಣ ದೀಕ್ಷೆಯಲಿ , ನಿರ್ಯಾಣಘಟ್ಟದಲಿ
ನಿರ್ಮಿತ್ರನಿರಲು ಕಲಿ ಮಂಕುತಿಮ್ಮ