ಶನಿವಾರ, ಜನವರಿ 29, 2011

ಅಮಿತನ ಕನಸಿನ ಪಯಣ...

ಎಷ್ಟು ಸಲ ಅಂತ ರಿಫ್ರೇಶ್ ಮಾಡೋದು... ಏನೂ ಹೊಸ ಅಪ್ಡೇಟ್ಸ್ ಬರ್ತಾನೆ ಇಲ್ವಲ್ಲ ಅಂತ ಬೇಜಾರ್ ಮಾಡ್ಕೊಂಡು ಇನ್ನೇನ್ ಫೇಸ್ಬುಕ್ ಕ್ಲೋಸ್ ಮಾಡ್ಬೇಕು ಆನ್ಕೊಳ್ಳ್ ತ್ತಿದ್ದಂಗೆ ಕಾಣ್ಸಿದ್ದು 'ಸಂದೇಶಪೆಟ್ಟಿಗೆ'  ಯೊಳಗೊಂದು ಹೊಸ ಸಂದೇಶ.... ಅದು ಅಮಿತ್ ಕಂಡ ಕನಸಿನ ವಿವರಣೆಯಾಗಿತ್ತು .... ಸಿನಿಮಾದ ಗಾಳಿ-ಗಂಧ ಗೊತ್ತಿಲ್ದೇ ಇರೋ ಡೈರೆಕ್ಟರ್ನ ಹತ್ರ ಬರ್ಸಿರೋ ಚಿತ್ರಕಥೆ ತರ ಇದ್ದ ಆ ಹಾಸ್ಯಮಯ ಕನಸಿನಲ್ಲಿ ನಾನು ಒಬ್ಬ ಪಾತ್ರಧಾರಿ ಆಗಿದ್ದರಿಂದ ಇಲ್ಲಿ  ಹಂಚಿಕೊಳ್ಳುತ್ತಿದ್ದೇನೆ ....

ಓದುವ ಮೊದಲು ...
ನವೋದಯ = ಮಂಡ್ಯದ ಶಿವಾರಗುಡ್ಡ, ಮಲ್ಲೀಗೆರೆ = ಕೆ ಆರ್ ಎಸ್ ಬಳಿಯಿರುವ ನನ್ನೂರು... 
ನಾನು= ಅಮಿತ್ , ನೀನು = ಚಂದ್ರು,

"ಮಂಡ್ಯದ ನಮ್ಮ ಪ್ರಾಥಮಿಕ ಶಾಲೆ ಇಂದ ನಾನು ನೀನು ನಮ್ಮ ನವೋದಯ ಫ್ರೆಂಡ್ ಇಟ್ಟಿದ್ದ ಆಟೋದಲ್ಲಿ ಹೊರಟೆವು... ಅಲ್ಲಿಂದ ತಲುಪಿದ್ದು ಮಲ್ಲಿಗೆರೆಗೆ... ಬರಿ ನಾನು ನೀನು ಮಾತ್ರ.. ನವೋದಯ ಫ್ರೆಂಡ್ ಹಾಗು ಅವನ ಆಟೋ ಏನ್ ಆಯಿತು ನತ್ ಗೊತ್ತಿಲ್ಲ.. ನಿಮ್ಮನೆ ಬೀಗ ಆಕಿತ್ತು.. ಛೆ ನಾನ್ ಬರದು ಗೊತ್ತಿದ್ರು ಎಲ್ಲೋ ಹೋಗಿದರೆ ಅಂತ ನೀನು ಗೊಣಗಿದೆ... ನಾನು ಮನೆ ಬೀಗ ಹೊಡಿದೆ ಹೇಗಾದ್ರು ಒಳಗೆ ಹೋಗಬಹುದ ಅಂತ ಯೋಚನೆ ಮಾಡ್ತಾ ಇದ್ದೆ.. ಆ ಹೊತ್ತಿಗೆ ನವೋದಯದ ಅನೇಕ ಗೆಳೆಯರು ಮಲ್ಲಿಗೆರೆಯ ಅವರವರ ಮನೆಯಿಂದ ಹೊರಬಂದು "ಹಬ್ಬ ನಮ್ಮ ಮನೆಯವರನ್ನು ಮೀಟ್ ಮಾಡಿ ಆಯಿತು ಹೋಗೋಣ" ಎಂದರು! ಅವರು ಯಾವಾಗ, ಹೇಗೆ ಬಂದರು ಎಂದು ನನಗೆ ಗೊತ್ತಿಲ್ಲ.. ಸರಿ ಎಂದು ನಾನು ನೀನು ಅಲ್ಲಿಂದ ನನ್ನ ಕಪ್ಪು ಟಿವಿಎಸ್ ಏರಿ ಹೊರಟೆವು... ಮತ್ತೆ ಟಿವಿಎಸ್ ಎಲ್ಲಿಂದ ಬಂತು ಅಂತ ಗೊತ್ತಿಲ್ಲ... ಸ್ವಲ್ಪ ಹೊತ್ತಿನ ನಂತರ ಇಳಿದದ್ದು ಒಂದು ಎತ್ತರದ ಪ್ರದೇಶದಲ್ಲಿ.. ಅದು ಎಷ್ಟು ಚೆನ್ನಾಗಿತ್ತು ಅಂದರೆ ನಾನು ಇದುವರೆಗೂ ಅಂತಹ ಜಾಗ ಇರುವ ಬಗ್ಗೆ ಕೇಳಿಲ್ಲ... ಮಂಜಿಲ್ಲದ ನೀಲಿ-ಶ್ವೇತ ಮಿಶ್ರಿತ ಪರ್ವತ, ಅಲ್ಲಲ್ಲೇ ಕಣಿವೆ.. ಇನ್ನೊಂದು ವಿಷಯ - ಈಗ ನಮ್ಮ ಜೊತೆ ನವೋದಯದ ಗೆಳಯ ಇದ್ದ! ಫ್ಲೈಟ್ ಜರ್ನಿ ಹೇಗಿತ್ತು ಅಂತ ಕೇಳಿದ.. ಮಸ್ತ್ ಅಂತ ನಾನು ಹೇಳಿದೆ.. ಇದು ಯಾವ ಜಾಗ ಅಂತ ನೀನು ಕೇಳಿದೆ.. ಅಲ್ಲಲ್ಲೇ ಇದ್ದ ಜನರ ಮುಖ ಲಕ್ಷಣ ಹಾಗು ನನ್ನ ಭೂಗೋಳದ ಅರಿವನ್ನ ಉಪಯೋಗಿಸಿ ಆಸ್ಟ್ರೇಲಿಯಾ ಅಂತ ಹೇಳಿದೆ.. ಅದಕ್ಕೆ ನನ್ನ ನವೋದಯದ ಗೆಳೆಯ ಇದು ಆಸ್ಟ್ರೇಲಿಯಾ ಅಲ್ಲ ಹಾಂಗ್-ಕಾಂಗ್ ಅಂತ ಹೇಳಿದ.. ಆಗ ಅಲ್ಲಿದ್ದ ಜನರ ಮುಖಗಳನ್ನ ಮತ್ತೆ ನೋಡಿದೆ.. ಅವರ ಮುಖಗಳು ಚಿನ್ಕಿಗಳ ಮುಖಗಳ ಹಾಗೆ ಬದಲಾಗಿದ್ದವು! ಸ್ವಲ್ಪ ಹೊತ್ತಿನ ನಂತರ, ನನ್ನ ನವೋದಯದ ಗೆಳಯ ಬನ್ನಿ ನಡ್ಕೊಂಡು ಮೈಸೂರಿಗೆ ಹೋಗ್ಬೇಕು ಬೇಗ ಹೊರಡೋಣ ಅಂತ ಹೇಳಿದ.. ಆ ಜಾಗ ಎಷ್ಟು ಸುಂದರವಾಗಿತ್ತು ಅಂದರೆ ಅಲ್ಲಿಂದ ಹೊರಡಲು ನನಗೆ ಮನಸ್ಸಿರಲಿಲ್ಲ.. ಅಲ್ಲಿಂದ ಹೊರಡುವುದನ್ನು ತಡೆಯಲು ತುಂಬಾ ಕಷ್ಟಪಟ್ಟು ಕಣ್ಣುಗಳನ್ನು ತೆರೆದೆ... ಹಾಸಿಗೆಯ ಮೇಲೆ ಹತ್ತು ನಿಮಿಷ ಘಾಡವಾಗಿ ಯೋಚಿಸಿ ಮೈಮುರಿಯುತ್ತ ನನ್ನ ಮಧ್ಯಾನದ ಮೂರುವರೆ ಘಂಟೆಯ ದೀರ್ಘ ನಿದ್ರೆಯಿಂದ ಎದ್ದು ಕಳೆದ ವಿಚಿತ್ರ ಸಮಯವನ್ನೂ ದಾಖಲಿಸಬೇಕು ಅಂತ ಫೇಸ್ಬುಕ್ಗೆ ಲಾಗಿನ್ ಆಗಿ ಈ ಸಂದೇಶನ ನಿನಗೆ ಕಳುಹಿಸುತ್ತಾ ಇದ್ದೀನಿ.. "

ಸಾಮಾನ್ಯವಾಗಿ ಬೋರಿಂಗ್ ಆಗಿರುವ ಅಮೆರಿಕದ ವಾರದ ಕೊನೆ ಬಹಳ ಕಾಲದ ನಂತರ ಹಾಸ್ಯದೊಂದಿಗೆ ಕೊನೆಗೊಂಡಿತು..!

ಶುಕ್ರವಾರ, ಜನವರಿ 14, 2011

ಸಂಕ್ರಾಂತಿ ಸಡಗರವ ನೆನೆಯುತ.....

ಸಂಕ್ರಾಂತಿ ಹುಡುಗರಿಗಲ್ಲ ಹುಡುಗಿಯರಿಗೆ ಅಂತ ನಮ್ಮಮ್ಮ ಆಗಾಗ ಹೇಳುತ್ತಿದ್ದು ಕೇಳಿ ಬೇಸರಗೊಳ್ಳುತ್ತಿದ್ದ ನನಗೆ ಸಮಾಧಾನ ನೀಡುತ್ತಿದ್ದು ಅವರು ಮಾಡುತ್ತಿದ್ದ ಎಳ್ಳು-ಬೆಲ್ಲ. ತಂಗಿಯರೆಲ್ಲ ಹೊಸ ಬಟ್ಟೆ ಕೊಳ್ಳುವಾಗ ಹೊಮ್ಮುತ್ತಿದ್ದ ಅಸಮಾಧಾನದ ಕ್ರಾಂತಿ ಸಂಕ್ರಾಂತಿಯಂದು ಬೇಯಿಸಿದ ಹಸಿ ಅವರೆಕಾಯಿ ಮತ್ತು ಗೆಣಸು ತಿಂದ ನಂತರವೇ ಕಡಿಮೆಯಾಗುತ್ತಿತ್ತು. ಸಂಕ್ರಾಂತಿ ಸಂಭ್ರಮ ಹಬ್ಬಕ್ಕೆ ಒಂದೆರಡುವಾರ ಇರುವಾಗಲೇ ಹೊಸವರ್ಷದೊಂದಿಗೆ ಆರಂಭವಾಗುತ್ತಿತ್ತು. ಶಾಲೆಯಲ್ಲಿ ಹೊಸವರ್ಷಕ್ಕೆ ಗ್ರೀಟಿಂಗ್ಸ್ ಕಾರ್ಡ್ ಕೊಡದೆ ಮುನಿಸಿಕೊಳ್ಳುತ್ತಿದ್ದ ಗೆಳೆಯರಿಗೆ ‘ಹೊಸ ವರ್ಷ ಮತ್ತು ಸಂಕ್ರಾಂತಿ’ ಎರಡು ಸೇರಿಸಿ ಗ್ರೀಟಿಂಗ್ಸ್ ಕಾರ್ಡ್ ಕೊಡುವುದಾಗಿ ಹೇಳುತ್ತಲೇ ಸಂಕ್ರಾತಿಯ ಆಗಮನ.

ಗ್ರೀಟಿಂಗ್ಸ್ ಕಾರ್ಡ್ ಜೊತೆಗೆ ಬರೆಯುತ್ತಿದ್ದ ಬಾಲಿಶ ಕವನವೊಂದು ನೆನಪಾಗುತ್ತಿದೆ ... ‘ನಾನೊಂದು ಕ್ರಾಂತಿ... ನೀನೊಂದು ಕ್ರಾಂತಿ... ನಮ್ಮಿಬ್ಬಿರ ಕ್ರಾಂತಿ ಈ ಸಂಕ್ರಾಂತಿ‘     

ಶಾಲೆ ಮುಗಿಸಿ ಮನೆಗೆ ಬಂದರೆ ಸಂಕ್ರಾತಿ ಕಚ್ಚಾ ವಸ್ತುಗಳ ಸಂಗ್ರಹ ... ಗೆಣಸು .. ಅವರೆಕಾಯಿ ... ಕಬ್ಬು .... ಕಲೆಹಾಕಲು ಎಲ್ಲಿಲ್ಲದ ಉತ್ಸಾಹ. ಆಗ ತಾನೇ ಕಟಾವುಗೊಂಡ ಗೆಣಸಿನ ಗದ್ದೆಗಳಲ್ಲಿ ಹೆಕ್ಕುವವರ ಕೈಗೆ ಸಿಕ್ಕದೆ ಮಣ್ಣಿನಲ್ಲೇ ಹುದುಗಿ ಚಿಗುರೊಡೆಯುತ್ತಿದ ಗೆಣಸು ಹುಡುಕಲು ದೊಡ್ಡ ಮರಿಸೈನ್ಯವೇ ಹೊರಡುತ್ತಿತ್ತು. ಕುಡುಗೋಲು , ಪಿಕಾಸಿ , ಗುದ್ದಲಿ... ಕೈಗೆ ಸಿಕ್ಕಿದ ಎಲ್ಲಾ ವಸ್ತುಗಳು ಆಯುಧಗಳೇ. ಅತಿ ಹೆಚ್ಚು ಕಲೆಹಾಕಿದವರಿಗೆ ದಿನದ ಗೌರವ.ಹಾಗೆ ಮನೆಗೆ ಹಿಂದಿರುಗುವಾಗ ಹಾದಿಯಲ್ಲಿ ಕೊಯ್ದ ರಾಗಿ ಹೊಲಗಳ ಅವರೆಕಾಯಿ ಸಾಲುಗಳ ಮೇಲೆ ದಾಳಿ. ಅಪ್ಪಿ ತಪ್ಪಿ ಹೊಲದವರ ಕಣ್ಣಿಗೆ ಬಿದ್ದರೆ ಓಟ, ಸಂಕ್ರಾಂತಿಯ ಸಮಯವಾದ್ದರಿಂದ ಹೊಲದವರ ಕೋಪ ಏಟಿಗೆ ಬದಲು ಬೆದರಿಕೆಗಷ್ಟೇ ಸೀಮಿತ. ಮನೆಗೆ ಮರಳಿ ಅಂದಿನ ಶ್ರಮಫಲದ ರಾಶಿ ನೋಡುತ್ತಿದ್ದರೆ ಗೆಣಸು ಬಗೆದು ತರಚಿದ ಕೈಯಾಗಲಿ.ಅವರೆಕಾಯಿ ಸೋನೆ ತಗುಲಿ ಉರಿಯುತ್ತಿದ್ದ ಮುಖವಾಗಲಿ, ಕೂಳೆ ತರಚಿ ರಕ್ತ ಸೋರುವ ಕಾಲಾಗಲಿ ಪರಿವೆಗೆ ಬರುತ್ತಿರಲಿಲ್ಲ...

ಸಂಕ್ರಾಂತಿ ದಿನ ಚುಮು-ಚುಮು ಚಳಿಯಲ್ಲಿ ಬೇಗನೆ ಎದ್ದು ಅಪ್ಪನ ಜೊತೆ ದನ ಕುರಿ ಹಿಡಿದು ಹೊಳೆಗೆ ಹೊರಟರೆ ಅಷ್ಟರಲ್ಲಾಗಲೆ ಸೇರುರುತ್ತಿದ್ದ ಜನರ ದಂಡಿನೊಡನೆ ಸೇರಿ ಓರಗೆಯವರೊಂದಿಗೆ ದನಗರುಗಳೊಂದಿಗೆ ಸ್ಪರ್ದೆಯೊಡ್ಡಿ ಈಜಾಟ. ಕಾವೇರಿ ಅಭ್ಯಂಜನ.ಮುಗಿಸಿ ನೇಸರನ ಉತ್ತರಾಯಣ ಪಯಣದ ಮೊದಲ ಕಿರಣಗಳಿಗೆ ಹೊಳೆದಂಡೆಯಲಿ ಕೆಲಕಾಲ ಮೈಯೊಡ್ಡಿ ಮಲಗಿದರೆ ಅದೇನೋ ಉಲ್ಲಾಸ. ಹೊಳೆಯಿಂದ ಬರುತ್ತಲೇ ಗೋವುಗಳ ಶೃಂಗಾರಕ್ಕೆ ಮನೆಯಲ್ಲಿ ಎಲ್ಲ ಸಿದ್ದವಾಗಿರುತ್ತಿತ್ತು. ಮನಸಾರೆ ಅವುಗಳನ್ನೂ ಶೃಂಗರಿಸಿ ಪೂಜಿಸಿದರೆ ಹುಡಗರ ಸಂಕ್ರಾತಿ ಮುಗಿಯುತ್ತಿತ್ತು. ಒಮ್ಮೊಮ್ಮೆ ಶೃಂಗಾರ ಹೆಚ್ಚಾಗಿ ಬಿಳಿ ಕುರಿಗಳ ಬಣ್ಣವಂತೂ ಪೂರ್ತಿ ಹರಿಶಿನಮಯ.ಮತ್ತೆ ಅವು ಬಿಳಿ ಯಾಗುತ್ತಿದ್ದು ಜೋರು ಮಳೆಯಲ್ಲಿ ತೂಯ್ದಾಗಲೋ ಅಥವಾ ಉಗಾದಿಯಲ್ಲೋ.

ಊರೊಳಗೆ ಎಲ್ಲ ಮನೆಗಳ ಮುಂದೆ ಭರ್ಜರಿ ರಂಗೊಲೆಗಳು ಹೆಣ್ಣುಮಕ್ಕಳ ಗಡಿಬಿಯಾಗಲೇ ಶುರುವಾಗಿರುತ್ತಿತ್ತು. ದೇವರ ಪೂಜೆ ಮತ್ತು ಉಪಹಾರ ಮುಗಿಯುವುದರೊಳಗೆ ಎಳ್ಳು-ಬೆಲ್ಲ ಪೊಟ್ಟಣ ಕಟ್ಟುವ ಕೆಲಸ ನೇಮಕ ವಾಗುತ್ತಿತ್ತು. ಪ್ರತಿ ಸಂಕ್ರಾತಿಗೂ ತಪ್ಪದೆ ಬರುವ ‘ಹಳ್ಳಿ ಮೇಷ್ಟ್ರು’ ಚಿತ್ರದ ‘ಸಂಕ್ರಾಂತಿ ಬಂತು ರತ್ತೋ ರತ್ತೋ ...’ ಗೀತೆಗೆ ಕೋರಸ್ ಕೊಡುತ್ತ ಪೊಟ್ಟಣ ಕಾರ್ಯ ಮುಗಿಯುತ್ತಿತ್ತು.

ಸಂಜೆ ಹೊತ್ತಿಗೆ ತಂಗಿಯರಿಂದ ಎಳ್ಳುಬೀರಲು ಸಹಾಯಕ್ಕಾಗಿ ಬೇಡಿಕೆ. ಎಳ್ಳು-ಬೆಲ್ಲ ಪೊಟ್ಟಣ ತುಂಬಿದ ಪಾತ್ರೆ ಹಿಡಿದು ಸಹಾಯಕನಾಗಿ ಹೊರಟರೆ..... ಇದು ನಮ್ಮ ಊರೇನಾ ಎಂದು ವಿಸ್ಮಯಗೊಳ್ಳುವಷ್ಟು ಸಂಭ್ರಮ ಸಡಗರ ತುಂಬಿದ ಬೀದಿಗಳು, ಬಣ್ಣ ಬಣ್ಣದ ಬಟ್ಟೆ ತೊಟ್ಟು ನಳನಳಿಸುತ್ತಿದ್ದ ಹೆಣ್ಣುಮಕ್ಕಳು. ಶಾಲೆಯಲ್ಲಿ ನೋಡುತ್ತಿದ್ದ ಅದೇ ಮುಖಗಳು ಸಂಕ್ರಾಂತಿಯಂದು ಮಾತ್ರ ವಿಭಿನ್ನ ಮತ್ತು ಚೇತೋಹಾರಿ. ಎಷ್ಟೋ ಮನೆಗಳ ಒಳದರ್ಶನವಾಗುತ್ತಿದ್ದು ಸಂಕ್ರಾಂತಿಯಂದೇ. ಪ್ರತಿ ಮನೆಯಲ್ಲೂ ಎಳ್ಳು-ಬೆಲ್ಲ, ಸಕ್ಕರೆ ಅಚ್ಚು, ಕಬ್ಬು ಹಂಚಿ ‘ಎಳ್ಳು-ಬೆಲ್ಲ ತಿಂದು ಒಳ್ಳೆ ಮಾತಾಡಿ ‘ ಎಂದು ಹಾರೈಸುವುದರ ಜೊತೆಗೆ ಹೊಸಬಟ್ಟೆಗಳ ಬಗ್ಗೆ ವಿಚಾರ ವಿನಿಮಯ ನಡೆಯುತ್ತಿತ್ತು. ಎಲ್ಲ ಮುಗಿಸಿ ಮನೆ ಮರಳುವುದರೊಳಗೆ ವಸ್ತ್ರವಿನ್ಯಾಸದಲ್ಲಿ ಅಘಾದ ಜ್ಞಾನ ಪ್ರಾಪ್ತಿಯಾಗುತ್ತಿತ್ತು. ಅಷ್ಟರೊಳಗೆ ಅಮ್ಮನ ಕೈಯಲ್ಲಿ ಹದವಾಗಿ ಬೆಂದ ಅವರೆಕಾಯಿ ಗೆಣಸು ನಮಗಾಗಿ ಕಾದಿರುತ್ತಿತ್ತು. ಎಲ್ಲಾ ಒಟ್ಟಾಗಿ ಕುಳಿತು ಬಿಸಿ ಬಿಸಿ ಕಾಫಿ ಕುಡಿಯುತ್ತ ಅಮ್ಮ ಬಿಡಿಸಿ ಕೊಡುತ್ತಿದ್ದ ಅವರೆಕಾಯಿ ಗೆಣಸು ತಿನ್ನುತ್ತ ಗಂಟೆಗಟ್ಟಲೆ ಹರಟುತ್ತ ನಿಧಾನಾವಾಗಿ ನಿದ್ರೆಯ ಮಡಿಲಿಗೆ ಜಾರಿಸುತ್ತಿದ್ದ ಆ ಆಪ್ತ ಸಂಕ್ರಾತಿಯ ನೆನಪು ಸಪ್ತ ಸಾಗರದಾಚೆ ರಿಂಗಿಣಿಸುತ್ತಿದೆ.
ಮಲ್ಲೀಗೆರೆ  
-ಚಂದ್ರು ಮಲ್ಲೀಗೆರೆ

ಮಂಗಳವಾರ, ಜನವರಿ 11, 2011

ಹಾರೈಕೆಗಳು ತಾಯ್ನುಡಿಯಲ್ಲಿದ್ದರೆ ಮನಸ್ಸಿಗೆ ಹೆಚ್ಹು ಹತ್ತಿರ...

ಇತ್ತೀಚೆಗೆ ನನ್ನ ಗೆಳೆಯ ಅಮಿತ್ ತನ್ನ ತಂಗಿ ಮಗುವಿಗೆ ಶುಭಕೋರಿ ಅಮೇರಿಕಾದಿಂದ ಉಡುಗೊರೆಯೊಂದನ್ನು ಕಳಿಸಿದ್ದ. ಉಡುಗೊರೆ ಜೊತೆಗೆ ಕಳಿಸಿದ್ದ ಒಂದು ಸಂದೇಶವೊಂದನ್ನು ನನಗೆ ತೋರಿಸಿದ. ಅದು ಹೀಗಿತ್ತು


ಇದನ್ನ ನೋಡಿ ಬಹಳ ಸಂತೋಷ ಆಯ್ತು ಜೊತೆಗೆ ನಮ್ಮಲ್ಲಿ ತಾಯ್ನುಡಿಯಲ್ಲಿ ಶುಭಕೋರುವ ಪದ್ಧತಿ ನಿಧಾನವಾಗಿ ಮರೆಯಾಗುತ್ತಿರುವ ಯೋಚನೆ ಕೂಡ ಮೂಡಿತು...
ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವ ನಮ್ಮಜೀವನ ಶ್ಯಲಿಯ ಜೊತೆಗೆ ನಮ್ಮ ಆಡುಭಾಷೆಯನ್ನು ಕಲುಶಿತ ಗೊಳಿಸಿರುವುದು ತಿಳಿದಿರುವ ವಿಷಯ. ಶುಭ ಸಂದರ್ಭಗಳಲ್ಲಿ ಶುಭಾಶಯ ಕೋರುವ ಮತ್ತು ಹಾರೈಸುವ ಪದ್ದತಿಯಂತು ಪೂರ್ತಿ ಇಂಗ್ಲಿಷ್ ಮಯ. ಎಲ್ಲಿ ಕೇಳಿದರು 'ಹ್ಯಾಪಿ ನ್ಯೂ ಇಯರ್', 'ಹ್ಯಾಪಿ ಮ್ಯಾರೀಡ್ ಲೈಫ್', 'ಹ್ಯಾಪಿ ಬರ್ತ್ಡೇ', 'ಕಾಂಗ್ರಾಜು ಲೇಶನ್ಸ್', 'ಗಾಡ್ ಬ್ಲೆಸ್ಸ್ ಯು',  ಥಾಂಕ್ಯು ಗಳೇ. ಕನ್ನಡದಲ್ಲಿ ಶುಭಕೋರಿದರೆ ಅಥವಾ ಹಾರೈಸಿದರೆ ಆಭಾಸ, ಕೀಳರಿಮೆ ಎಂಬ ಭಾವನೆಯು ಬೆಳೆದಿದೆ.... ಹೀಗೆ ಮುಂದುವರೆದರೆ ನಮ್ಮ ಮುಂದಿನ ಪೀಳಿಗೆ ಮಕ್ಕಳಿಗೆ ಕನ್ನಡದಲ್ಲೂ ಶುಭಕೋರಬಹುದು ಅಂತಹ ಸುಂದರ ಅರ್ಥಗರ್ಭಿತ  ಪದ,ವಾಕ್ಯಗಳು ಇವೆ ಅನ್ನುವುದೇ ತಿಳಿದಿರುವುದಿಲ್ಲ ಎಂದು ನನ್ನ ಅನಿಸಿಕೆ.
 ಈ ಇಂಗ್ಲಿಶ್ ಪದಗಳು ಒಂದು ರೀತ್ಯಿಯ ಯಾಂತ್ರಿಕ ಮಾತುಗಳಾಗಿ ಕಾಣಿಸುತ್ತವೆ.ಆ ಪದಗಳ ಹಿಂದೆ ಯಾವುದೇ ನಿಜವಾದ ಭಾವನೆಗಳು ತುಂಬಿ ಹಾರಿಸುತ್ತಿರುವ ಹಾಗೆ ಅನ್ನಿಸುವುದೇ ಇಲ್ಲಾ. ಅದೇ ಮಾತೃಭಾಷೆಯಲ್ಲಿ  ಹಾರೈಸಿ ನೋಡಿ.. ಮನತುಂಬಿದ ಮಾತೃಭಾಷೆಯ ಹಾರೈಕೆ ಹಾರೈಸಿದವರ ಮನಕ್ಕೆ ಹತ್ತಿರವಾಗುವುದರಲ್ಲಿ ಸಂದೇಹವಿಲ್ಲ ...
 'ಹ್ಯಾಪಿ ನ್ಯೂ ಇಯರ್', 'ಹ್ಯಾಪಿ ಮ್ಯಾರೀಡ್ ಲೈಫ್', 'ಹ್ಯಾಪಿ ಬರ್ತ್ಡೇ', 'ಕಾಂಗ್ರಾಜು ಲೇಶನ್ಸ್', 'ಗಾಡ್ ಬ್ಲೆಸ್ಸ್ ಯು',  ಥಾಂಕ್ಯು ಗಳ ಕಿತ್ತೊಗೆದು ಬದಲಿಗೆ ಸಾದ್ಯವಾದಷ್ಟು ..  'ಹೊಸ ವರ್ಷದ ಶುಭಾಶಯಗಳು','ದಾಂಪತ್ಯ ಜೀವನ ಸುಖವಾಗಿರಲಿ','ಹುಟ್ಟು ಹಬ್ಬದ ಶುಭಾಶಯಗಳು', 'ದೇವರು ಒಳ್ಳೆಯದು ಮಾಡಲಿ', ಧನ್ಯವಾದ, ಹದುಳವಿರಲಿ......  ಹೀಗೆ ಇತರೆ ಹಾರೈಕೆಗಳನ್ನು ಬಳಸಿನೋಡಿ... ಮೊದಮೊದಲಿಗೆ ಆಭಾಸವಾಗಿ ತೋರಬಹುದು... ಕ್ರಮೇಣ ತಾಯ್ನುಡಿಯ ಹಾರೈಕೆಯ ಮಹತ್ವ ತನಗೆ ತಾನೇ ಗೋಚರಿಸುತ್ತದೆ....

ಭಾನುವಾರ, ಜನವರಿ 9, 2011

ಕ್ರಿಕೆಟ್ಟು ಮತ್ತು ಡಾಲರು ...

ನಿನ್ನದೇ ಆಟ
ನಿನ್ನದೇ ಮೈದಾನ
ನಿನ್ನವರೇ ಆಟಗಾರರು
ನಿನ್ನವರೇ ಮಾಲೀಕರು
ಕಟ್ಟುವರೇಕೆ ಬೆಲೆ 'ಡಾಲರಿ'ನಲ್ಲಿ?
ನಿನ್ನವರೇ ನಿನ್ನ ಕಡೆಗಣಿಸುವರೇಕೆ?
ಛೇ ಬಡಪಾಯಿ
ನೀ ರೂಪಾಯಿ!